Close

ಸಂನ್ಯಾಸ ಗೀತೆ (ಚಾಗಿಯ ಹಾಡು)- ಯುವಶಕ್ತಿಯ ಚೈತನ್ಯದ ಚಿಲುಮೆ

ಸಂನ್ಯಾಸ ಗೀತೆ (ಚಾಗಿಯ ಹಾಡು)- ಯುವಶಕ್ತಿಯ ಚೈತನ್ಯದ ಚಿಲುಮೆ

ಭಾರತೀಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯಲ್ಲಿ ಸಂನ್ಯಾಸ ಆಶ್ರಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಸಂನ್ಯಾಸಿಗಳು ಈ ದೇಶದ ಅಸ್ಮಿತೆಯ ಪ್ರತೀಕ. ಅವರ ನಡೆ, ನುಡಿ, ಆಚರಣೆ, ಜ್ಞಾನ, ಸಾತ್ವಿಕ ವಿಚಾರ, ಸಮಾಜೋಪಯೋಗಿ ಕಾರ್ಯಗಳು, ರಾಷ್ಟ್ರಭಕ್ತಿ J¯è ಕಾಲಕ್ಕೂ ನಮಗೆ ಮಾದರಿ. ರಾಷ್ಟ್ರಚಿಂತಕ ಶ್ರೀ ಕೆ.ಎನ್ ಗೋವಿಂದಾಚಾರ್ಯರು ಹೇಳುವಂತೆ “ಈ ದೇಶ ಸಂತರ ಸಾತ್ವಿಕ ಶಕ್ತಿಯ ಬಲದಿಂದ ಚಲಿಸುತ್ತಿದೆ ಹೊರತು ಯಾವುದೇ ಇತರೆ ಶಕ್ತಿಯಿಂದಲ್ಲ”. ನಿರಂತರ ಪ್ರವಾಹದಂತೆ ಹರಿಯುವ ಈ ಸಾತ್ವಿಕ ಶಕ್ತಿಯ ತೇಜಸ್ಸು ಇಂದಿಗೂ ನಮ್ಮ ಸಮಾಜದಲ್ಲಿ ಅತ್ಯಂತ ಪ್ರಜ್ಞಾಪೂರ್ವಕವಾಗಿ ಜಾಗೃತವಾಗಿದೆ. ಇಂತಹ ಸಂನ್ಯಾಸ ಆಶ್ರಮ ಹಾಗೂ ಸಂನ್ಯಾಸೀ ಧರ್ಮದ ಕುರಿತು ಮಹಾನಾರಾಯಣೋಪನಿಷತ್ತಿನಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.

ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಷುಃ

ಪರೇಣ ನಾಕಂ ನಿಹಿತಂ ಗೃಹಾಯಾಂ ವಿಭ್ರಾಜದೇ ತಧ್ಯತಯೋ ವಿಶಂತಿ

ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ ಸಂನ್ಯಾಸ ಯೋಗಾಧ್ಯತಯ ಶುದ್ಧಸತ್ವಾಃ

ತೇಬ್ರಹ್ಮಲೋಕೇ ತು ಪರಾಂತಕಾಲೇ ಪರಾಮೃತಾತ್ಪರಿಮುಚ್ಯಂತಿ ಸರ್ವೇ

ದದ್ರಂ ವಿಪಾಪಂ ಪರಮೇಶ್ಮಭೂತಂ ಯತ್ಪುಂಡರೀಕಂ ಪರಮಧ್ಯಸಗ್ಗಸ್ಥಮ್

ತತ್ರಾಪಿ ದದ್ರಂ ಗಗನಂ ವಿಶೋಕತಸ್ಮಿನ್ ಯದಂತಸ್ತದುಪಾಸಿತಯ್ಯಂ

ಯೋವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ

ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ

ಕರ್ಮದಿಂದಾಗಲಿ, ಪ್ರಜೆಯಿಂದಾಗಲಿ, ಧನ- ಸಂಪತ್ತಿನಿಂದಾಗಲೀ ಅಲ್ಲ, ಕೇವಲ ತ್ಯಾಗದಿಂದ ಅಮೃತತ್ವದ ಕಡೆಗೆ ಸಾಗಬಹುದು ಎಂಬುದು ಈ ಉಪನಿಷತ್ ಶ್ಲೋಕದ ಸ್ಥೂಲಾರ್ಥ. ಸಂನ್ಯಾಸ ಆಶ್ರಮ ಸ್ವೀಕರಿಸದ ಅನೇಕ ಸಂನ್ಯಾಸಿಗಳಿಗಾಗಿ ಇದು ನಿತ್ಯಪಾಠದ ಉಪನಿಷತ್ತಾಗಿದೆ. ಸಂತರ ಪ್ರಜ್ಞೆ ಸಮಾಜದ ಮುಖ್ಯವಾಹಿನಿಯಲ್ಲಿ ಯಾವಾಗಲೂ ಜಾಗೃತವಾಗಿರುತ್ತದೆ. ಭರತವರ್ಷದ ಆಧ್ಯಾತ್ಮಿಕ ತಳಹದಿಯ ಮಹಾಶಕ್ತಿಯೇ ಸಂತಶಕ್ತಿ. ಭಾರತದ ಭವ್ಯ ಇತಿಹಾಸದಲ್ಲಿ ಇಡೀ ಸಂನ್ಯಾಸಿ ಪರಂಪರೆಗೆ ಒಂದು ಮಹತ್ವದ ತಿರುವು ನೀಡಿದವರು ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರು ಈ ರಾಷ್ಟ್ರ ಕಂಡ ವೀರ ಸಂನ್ಯಾಸಿ The warrior monk.

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ ಅದ್ವಿತೀಯವಾದದ್ದು, ಅವರು ಬದುಕಿ ಬಾಳಿದ ಅತ್ಯಲ್ಪ ಸಮಯದಲ್ಲಿ ಅವರು ಮುಂದಿನ ನೂರಾರು ವರ್ಷಗಳಿಗಾಗುವ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಸಂಪತನ್ನು ನಿರ್ಮಿಸಿದರು, ವಿಶ್ವ ಸುತ್ತಿ ಸನಾತನ ಧರ್ಮದ ಅಸ್ತಿತ್ವವನ್ನು, ಮಹತ್ವವನ್ನು ಪ್ರತಿಪಾದಿಸಿದರು. ಆತ್ಮವಿಸ್ಮತಿಯಿಂದ, ದಾಸ್ಯ ಮದಿರೆ ಕುಡಿದು ಕುಂಭಕರ್ಣ ನಿದ್ರೆಗೆ ಜಾರಿದ ಈ ದೇಶದ ಯುವಶಕ್ತಿಯನ್ನು ಬಡಿದೆಬ್ಬಿಸಿದರು. ಅವರ ಜೀವಿತಾವಧಿಯಲ್ಲಿದ್ದ ಅನೇಕ ಅಗಣಿತ ಪ್ರತಿಕೂಲ ಪರಿಸ್ಥಿತಿಗಳನ್ನೆಲ್ಲಾ ಮೀರಿ ಅವರು ಸಾಗಿದ ದಾರಿ ಹಾಗು ತಲುಪಿದ ಗುರಿ ಮಾತ್ರ ಅಸಾಧಾರಣ.

ಕುರುಕ್ಷೇತ್ರ ಯುದ್ಧದ ಪ್ರಾರಂಭದ ಹೊಸ್ತಿಲಲ್ಲಿ ಇನ್ನೇನು ಕದನವಾಗಬೇಕು ಎನ್ನುವಷ್ಟರಲ್ಲಿ ಅರ್ಜುನನಿಗೆ ಯುದ್ಧ ವೈರಾಗ್ಯ ಗೋಚರವಾಯಿತು. ಆಗ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಚಾಟಿ ಏಟಿನಂತೆ ತನ್ನ ವಿದ್ಯುತ್ ವಾಣಿಯಿಂದ “ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ” ಎಂದು ಹೇಳಿ ಯುದ್ಧಕ್ಕೆ ಸನ್ನದ್ಧನಾಗುವಂತೆ ಪ್ರೇರೇಪಿಸಿದ. “ಹೇ ಅರ್ಜುನ, ನೀನು ಹೇಡಿಯಂತೆ, ಕ್ಲೈಬ್ಯನಾಗಿ ಕೂಡಬೇಡ, ವೀರನಾದ ನಿನಗೆ ಹೃದಯ ದೌರ್ಬಲ್ಯದ ಮಾತುಗಳು ಶ್ರೇಯಸ್ಕರವಲ್ಲ, ಅದು ಯುದ್ಧಧರ್ಮವಲ್ಲ” ಎಂದು ಅವನನ್ನು ಜಾಗೃತಗೊಳಿಸಿದನು. ಭಗವದ್ಗೀತೆಯ ಈ ಮಾತುಗಳು ಸರ್ವಕಾಲಕ್ಕೂ ಭಾರತೀಯ ಜನಾಂಗ ನೆನಪಿನಲ್ಲಿಡಬೇಕು.

ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ

ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ

ಅನೇಕ ಸಂಗತಿಗಳಲ್ಲಿ ಭಾರತೀಯ ಜನಮಾನಸದ ಮನಸ್ಥಿತಿ ಅರ್ಜುನನಂತೆಯೇ! ಇತಿಹಾಸ ಇದಕ್ಕೆ ಸಾಕ್ಷಿ. ಅರ್ಜುನನ ಮನಸ್ಥಿತಿಗೆ ದೇಶದ ಜನಮಾನಸ ತಲುಪಿದಾಗ ಸ್ವತಃ ಶ್ರೀಕೃಷ್ಣನೇ ಹೇಳಿದ “ಸಂಭವಾಮಿ ಯುಗೇ ಯುಗೇ” ಎಂಬ ಮಾತಿನಂತೆ ಶ್ರೀಕೃಷ್ಣನ ಅಂಶಸ್ವರೂಪಿ ವಿಭೂತಿ ಪುರುಷರು ಈ ರಾಷ್ಟ್ರದ ರಕ್ಷಣೆಗೈಯಲು ಧಾವಿಸಿದ್ದಾರೆ. ಚಾಣಕ್ಯ, ಶಂಕರಾಚಾರ್ಯರು, ವಿದ್ಯಾರಣ್ಯರು, ಸಮರ್ಥ ರಾಮದಾಸರಂತಹ ಮಹನೀಯರು ಈ ಭೂಮಿಯಲ್ಲಿ ಅವತರಿಸಿ ಸನಾತನ ಧರ್ಮದ ಪುನರುತ್ಥಾನ ಹಾಗೂ ಭರತವರ್ಷವೆಂಬ ಈ ಆರ್ಯಾವರ್ತದ ಕ್ಷಾತ್ರ ತೇಜಸ್ಸಿನ ರಕ್ಷಣೆ ಮಾಡಿದ್ದಾರೆ. ಇದೇ ಪಂಕ್ತಿಯಲ್ಲಿ ನಿಲ್ಲುವ ಇನ್ನೊಬ್ಬ ಮಹನೀಯರೆಂದರೆ ಸ್ವಾಮಿ ವಿವೇಕಾನಂದರು, ನಿಸ್ಸಂದೇಹವಾಗಿ ಅವರು ಶ್ರೀಕೃಷ್ಣಾಂಶ ಸ್ವರೂಪಿಗಳೇ. ಪರಕೀಯರ ಆಕ್ರಮಣದಿಂದ ತತ್ತರಿಸಿ ಹೋಗಿದ್ದ, ಪ್ರತಿ ಸ್ತರದಲ್ಲೂ ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆ, ತಮ್ಮ ಅಂತಃಸತ್ವವನ್ನು ಕಳೆದುಕೊಂಡು ಹತಾಶರಾಗಿದ್ದ ಭಾರತೀಯ ಸಮಾಜವನ್ನು ಬಡಿದೆಬ್ಬಿಸಲು ವಿವೇಕಾಂದರು ಹುಟ್ಟಿ ಬಂದರು.

ವಿವೇಕಾನಂದರ ಇಡೀ ಜೀವನವೇ ಒಂದು ಮಹಾಕಾವ್ಯದಂತೆ. ಸನ್ಮಾನ್ಯ ಡಿ.ವಿ.ಜಿ ಯವರು ವಿವೇಕಾನಂದರ ಕುರಿತು ಈ ರೀತಿ ಹೇಳುತ್ತಾರೆ. “ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಮದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ- ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕøತದಲ್ಲಿ ವ್ಯಾಕರಣ, ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲೀಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀ ರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ”.

ವಿವೇಕಾನಂದರ ಸಾಹಿತ್ಯ ಶಕ್ತಿ

ಪ್ರಾತಸ್ಮರಣೀಯರು, ಕನ್ನಡ ನಾಡು ಕಂಡ ಅದ್ವಿತೀಯ ಚಿಂತಕ, ವಿರಕ್ತ ರಾಷ್ಟ್ರಕ ಡಿ.ವಿ.ಜಿ ಯವರು ತಮ್ಮ “ಸಾಹಿತ್ಯ ಶಕ್ತಿ” ಕೃತಿಯಲ್ಲಿ ರಾಷ್ಟ್ರಕನಿಗೆ ಸಾಹಿತ್ಯದ ಅವಶ್ಯಕತೆ ಇದೆಯೇ? ಎಂಬ ವಿಚಾರದಲ್ಲಿ ಹೀಗೆ ಉಲ್ಲೇಖಿಸುತ್ತಾರೆ. “ನಮ್ಮ ಬಾಳಿನಲ್ಲಿ ನಿಜವಾದ ಒಳ್ಳೆಯದು ಯಾವುದು- ನಮಗೆ ಸೊಗಸೆಂದು ತೋರುವುದರಲ್ಲೆಲ್ಲ ಮೇಲಾದ ಸೊಗಸು ಎಂಥದ್ದು- ಎಂಬುದರ ಛಾಯೆಯನ್ನು ನಮ್ಮ ಜೀವದ ಕಣ್ಣ ಮುಂದೆ ಸುಳಿದಾಡಿಸಿ, ಮನಸ್ಸು ಆ ಕಡೆಗೆ ಓಲುವಂತೆ ಮಾಡುವುದು ಸಾಹಿತ್ಯದ ಉಪಕಾರ, ಅದು ಬೇಡವಾದವರು ಯಾರು?” ಎನ್ನುತ್ತಾರೆ.

ವಿವೇಕಾನಂದರ ಮಾತು, ಬರೆಹ, ಜೀವನ ಅಕ್ಷರಷಃ ಡಿ.ವಿ.ಜಿಯವರ ಮಾತನ್ನು ಪುಷ್ಠೀಕರಿಸುತ್ತದೆ, ವಿವೇಕಾನಂದರ ಮಾತು ಬರೆಹಕ್ಕೆ ಮನಸ್ಸು ಸಹಜವಾಗಿ ಓಲುತ್ತದೆ, ಅವರ ಸಾಹಿತ್ಯದ ಪ್ರಖರತೆಯಿಂದ ಪ್ರೇರಿತರಾದ ಸಾವಿರಾರು ವ್ಯಕ್ತಿ ಹಾಗೂ ಸಂಘಟನೆಗಳು ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಸಂನ್ಯಾಸ ಗೀತೆ:

ಸ್ವಾಮಿ ವಿವೇಕಾನಂದರು ಜಗತ್ತಿಗೆ ನೀಡಿದ ಅನನ್ಯ ಕೊಡುಗೆಗಳಲ್ಲಿ ಅವರ ಚಾಗಿಯ ಹಾಡು ಅಥವಾ ಸಂನ್ಯಾಸ ಗೀತೆಯೂ ಒಂದು. ಮೂಲತಃ ಸ್ವಾಮೀಜಿ ಇದನ್ನು ಇಂಗ್ಲೀಷ್‍ನಲ್ಲಿ ರಚಿಸಿದರು. ವಿವೇಕಾನಂದರು ಅಮೇರಿಕಾದ ಪ್ರವಾಸದಲ್ಲಿದ್ದಾಗ ರಚಿಸಿದ ಹಾಡು ಚಾಗಿಯ ಹಾಡು. ಸಂನ್ಯಾಸ ಧರ್ಮದ ಕುರಿತು, ಸಂನ್ಯಾಸಿಯ ಕರ್ತವ್ಯಗಳ ಬಗ್ಗೆ ಚಾಗಿಯ ಹಾಡಿನಲ್ಲಿ ಬಹು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಸಂನ್ಯಾಸ ಗೀತೆ ಇಡೀ ಭರತಖಂಡದ ಸಂನ್ಯಾಸಿಗಳಿಗೆ ನಿತ್ಯ ಪಾರಾಯಣದ ಗೀತೆಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಂನ್ಯಾಸ ಗೀತೆ ದೇಶಭಕ್ತಿಯ ಓತಪ್ರೇತ ಭಾವದ ಪ್ರತೀಕವಾಗಿದೆ, ರಾಷ್ಟ್ರದ ಅಭ್ಯುದಯಕ್ಕಾಗಿ ಹಾಗೂ ರಾಷ್ಟ್ರೀಯ ಪುನರುತ್ಥಾನಕ್ಕಾಗಿ ಹಗಲಿರುಳು ತಪಿಸಿದ ಸ್ವಾಮೀಜಿಯ ಮನದಾಳದ ಭಾವ ಶಬ್ದರೂಪ ತಳೆದು ಹೊರಬಂದಿದೆ.

ಸ್ವಾಮಿ ವಿವೇಕಾನಂದರ ಜಗದ್ವಿಖ್ಯಾತ ಚಿಕಾಗೊ ಭಾಷಣ ಹಾಗೂ ಆ ಭಾಷಣದಿಂದ ಇಡೀ ಅಮೇರಿಕಾದಲ್ಲಿ ಹಬ್ಬಿದ ಅವರ ಕೀರ್ತಿ ಅತ್ಯಂತ ಪ್ರಬಲವಾಗಿತ್ತು, ಸ್ವಾಮೀಜಿ ಹೋದಲ್ಲೆಲ್ಲಾ ಅವರ ಪ್ರಖರ ವಾಗ್ಘರಿಗೆ ಜನ ಮನಸೋತು ಅವರ ಶಿಷ್ಯರಾಗುತ್ತಿದ್ದರು.  1895 ರ ಜುಲೈ ಹಾಗೂ ಆಗಸ್ಟ್ ನ ಸಮಯದಲ್ಲಿ ಸ್ವಾಮೀಜಿ ಅಮೇರಿಕಾದಲ್ಲಿದ್ದಾಗ ಅಲ್ಲಿನ ಅನೇಕ ಭಕ್ತರು ಸ್ವಾಮೀಜಿಯನ್ನು ಒಂದು ವಿಶೇಷ ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಡಲು ವಿನಂತಿಸಿಕೊಂಡರು. ಅಮೇರಿಕಾದ ಅನೇಕ ನಗರಗಳಲ್ಲಿ ಓಡಾಡಿ ಭಾಷಣ ಮಾಡಿ ಸುಸ್ತಾಗಿದ್ದ ಸ್ವಾಮೀಜಿ ತಮ್ಮ ಭಕ್ತರ ಬೇಡಿಕೆಯನ್ನು ಹಲವು ಬಾರಿ ನಿರಾಕರಿಸಿದ್ದರು. ಕೊನೆಗೂ ಅವರ ಒತ್ತಾಯಕ್ಕೆ ಮಣಿದು ನ್ಯೂಯಾರ್ಕನ ಥೌಸಂಡ್ ಐಲ್ಯಾಂಡ್ ಪಾರ್ಕನಲ್ಲಿ ಸ್ವಾಮೀಜಿ ಸರಣಿ ಉಪನ್ಯಾಸಗಳನ್ನು ಅಮೇರಿಕಾದ ಭಕ್ತರಿಗೆ ನೀಡಿದರು. ಆ ಸಮಯದಲ್ಲಿ ರಚಿಸಿದ ಗೀತೆಯೇ ಸಂನ್ಯಾಸ ಗೀತೆ ಅಥವಾ ಚಾಗಿಯ ಹಾಡು.

ಮೂಲತಃ ಈ ಹಾಡನ್ನು ಸ್ವಾಮಿ ವಿವೇಕಾನಂದರು ಇಂಗ್ಲೀಷ್‍ನಲ್ಲಿ ರಚಿಸಿದರು. ಇದನ್ನು ಕನ್ನಡದಲ್ಲಿ ಪುನರ್ ಸೃಷ್ಟಿಸಿದವರು ರಾಷ್ಟ್ರಕವಿ, ರಸಋಷಿ ಕುವೆಂಪು. ಕುವೆಂಪು ಅವರು ರಚಿಸಿದ ಗೀತೆ ಕೇವಲ ಇಂಗ್ಲೀಷ್ ಭಾಷೆಯ ಭಾವಾನುವಾದವಲ್ಲ, ಅದು ಅಕ್ಷರಷಃ ಪುನರ್‍ಸೃಷ್ಠಿ. ಕುವೆಂಪು ಅವರು ಸ್ವಾಮೀಜಿಯ ಭಾವನೆಗಳನ್ನು ಕನ್ನಡೀಕರಿಸಿದ್ದಾರೆ, ಅವರು ಬಳಸಿದ ಶಬ್ದಗಳು ಮೈನವಿರೇಳಿಸುತ್ತವೆ. ಆತ್ಮವಿಸ್ಮøತಿಯಲ್ಲಿರುವ ನಮ್ಮ ಸಮಾಜದ ಅನೇಕ ಯುವಕರ ಎದೆಬಡಿತ ತೀವ್ರಗೊಳಿಸುತ್ತದೆ. ಯುವಶಕ್ತಿಯ ಝೇಂಕಾರದ ಪ್ರತೀಕಾಗಿ ಹೊರಹೊಮ್ಮುತ್ತದೆ. ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಇದನ್ನು ಸುಶ್ರಾವ್ಯವಾಗಿ ಹಾಡಿದಾಗ ನಮ್ಮನ್ನು ನಾವು ಮರೆತು ತನ್ಮಯರಾಗಿ ರಾಷ್ಟ್ರಕ್ಕಾಗಿ ಸಮರ್ಪಣೆಯ ಭಾವ ಜಾಗೃತವಾಗುತ್ತದೆ. ಚಾಗಿಯ ಹಾಡಿನ ಕನ್ನಡದ ಪುನರ್‍ಸೃಷ್ಠಿ ಎಷ್ಟು ತೇಜೋಭರಿತವಾಗಿದೆಯೆಂದರೆ ಸ್ವತಃ ಸ್ವಾಮಿ ವಿವೇಕಾನಂದರೇ ಇದನ್ನು ಕನ್ನಡದಲ್ಲಿ ರಚಿಸಿದರೇನೋ ಎಂಬಂತೆ ಭಾಸವಾಗುತ್ತದೆ.

“ಏಳು ಮೇಲೇಳೇಳು ಸಾಧುವೆ” ಎಂದು ಪ್ರಾರಂಭವಾಗುವ ಸಂನ್ಯಾಸ ಗೀತೆ, ಕಠೋಪನಿಷತ್ತಿನ “ಉತ್ತಿಷ್ಟತಃ ಜಾಗೃತ ಪ್ರಾಪ್ಯ ವರಾನ್ನಿಬೋಧತ” ಎಂಬ ಮಾತಿನ ಪ್ರೇರಣೆಯಾಗಿದೆ, ಅದೇ ಮುಂದೆ ಸ್ವಾಮೀಜಿಯ ಪ್ರಖ್ಯಾತ ನುಡಿ “ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ” ಗೆ ಮೂಲ ಸ್ರೋತವಾಯಿತು. “ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು” ಎಂದು ಹೆಳುತ್ತಾ ಸ್ವಾಮೀಜಿ ಭರತಖಂಡದ ಸಾಮಾಜಿಕ ಪುನರುತ್ಥಾನಕ್ಕಾಗಿ ಕರೆ ನೀಡಿದ್ದಾರೆ.

ಮುಂದೆ ಸಾಗುತ್ತಾ “ದಾಸನೆಂಬುದೆ ಸತ್ಯವು” ಎಂದು ಸ್ವಾಮೀಜಿ ಹೇಳುವಲ್ಲಿ ಅವರ ದಾಸತ್ವ ಹಾಗೂ ಸಮರ್ಪಣಾ ಮನೋಭಾವದ ಉತ್ತುಂಗ ಗೋಚರಿಸುತ್ತದೆ. “ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು” ಎಂದು ಹೇಳುತ್ತಾ ವ್ಯಕ್ತಿ ಶಕ್ತಿಯಾಗಿ ಮಾರ್ಪಾಡಾಗುವ ಬಗೆಯನ್ನು ತೋರಿಸಿಕೊಟ್ಟಿದ್ದಾರೆ. “ತನ್ನ ಜಯಿಸಿದ ಶಕ್ತನು, ಅವನೆಲ್ಲ ಜಯಿಸಿದ ಮುಕ್ತನು” ಎನ್ನುತ್ತಾ ವ್ಯಕ್ತಿ ತನ್ನ ಅಹಂಭಾವವನ್ನು ತ್ಯಜಿಸಿ ನಾನು, ನನ್ನಿಂದಲೇ ಎಂಬ ಭ್ರಮೆಯಿಂದ ಹೊರಬಂದರೆ ಇಡೀ ಜಗತ್ತನ್ನೇ ಜಯಿಸಬಹುದು ಎನ್ನುತ್ತಾರೆ.

“ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು” ಎಂದು ಮನುಷ್ಯ ಶಕ್ತಿಯ ಅಪರಿಮಿತ ಸಾಮಥ್ರ್ಯದ ಕುರಿತು ಸ್ವಾಮೀಜಿ ಹೇಳುತ್ತಾರೆ. ಎಲ್ಲಾ ಸಾಧನೆಗೆ ಸಂಕಲ್ಪ ಶಕ್ತಿಯೇ ಮುಖ್ಯ, ಮನುಷ್ಯನಿಗೆ ಮೀರಿದ ಸಾಧನೆ ಯಾವುದೂ ಇಲ್ಲ ಎಂಬುದು ಸ್ವಾಮೀಜಿಯ ಇಂಗಿತ. ಮುಂದೆ ಹೋಗುತ್ತಾ ವಿವೇಕಾನಂದರು “ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು” ಎನ್ನುತ್ತಾರೆ. ಯಾವುದೇ ಉತ್ತಮ ಕಾರ್ಯ ನಡೆಯಬೇಕಾದರೆ ನಿಂದೆ ಮಾಡುವವರು ಸುತ್ತಲೂ ಇರುತ್ತಾರೆ, ಅವರ ಕೆಲಸವೇ ನಿಂದೆ ಮಾಡುವುದು, ಅದರಿಂದ ಧೃತಿಗೆಡಬಾರದು!, ನಿಂದೆ ಮಾಡುವವರು ಇದ್ದಷ್ಟೂ ನಮ್ಮ ಸಾಮಥ್ರ್ಯ ಇಮ್ಮಡಿಯಾಗುತ್ತದೆ, ನಮ್ಮನ್ನು ಯಾರೂ ನಿಂದಿಸಬಾರದು ಎಂಬ ಭಾವನೆ ತರವಲ್ಲ ಎಂದು ಸ್ವಾಮೀಜಿ ನುಡಿಯುತ್ತಾರೆ.

ಸಂಸಾರದ ಬಂಧನದಲ್ಲಿ ಬಿದ್ದು ಜೀವನವಿಡೀ ಅದೇ ಜಂಜಾಟದಲ್ಲಿ ಬದುಕು ಸವೆಸುವವರಿಗೆ ಸ್ವಾಮೀಜಿ ಚಾಟಿ ಏಟಿನಂತೆ ಹೇಳುತ್ತಾರೆ “ಕನಸು ಕಾಣುತಲವರು ಸೊನ್ನೆಯ ಸರ್ವವೆನ್ನುತ ಮೆರೆವರು”. ರಾಷ್ಟ್ರಕ್ಕಾಗಿ ಸಮರ್ಪಿತರಾಗಲು ಎಲ್ಲಾ ಬಂಧನಗಳಿಂದ ಮುಕ್ತರಾಗಬೇಕು ಎಂದು ಸಂನ್ಯಾಸಿಗಳಿಗೆ ಕರೆ ನೀಡಿದ್ದಾರೆ ಸ್ವಾಮಿ ವಿವೆಕಾನಂದರು.

ಕರ್ಮಸಿದ್ಧಾಂತದ ಹಿನ್ನಲೆಯಲ್ಲಿ ಸ್ವಾಮೀಜಿ “ದೇಹ ಬಾಳಲಿ ಬೀಳಲಿ- ಅದು ಕರ್ಮನದಿಯಲಿ ತೇಲಲಿ!” ಎಂಬ ಭರವಸೆಯ ಮಾತನ್ನು ನುಡಿಯುತ್ತಾರೆ. ಜೀವನದುದ್ದಕ್ಕೂ ಮನುಷ್ಯನಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ, ಅದರಲ್ಲೂ ಯಾವುದೇ ಒಂದು ಮಹಾನ್ ಕಾರ್ಯ ಸಾಧಿಸಬೇಕಾದರೆ ಕಷ್ಟಗಳ ಸುರಿಮಳೆಯಾಗುತ್ತದೆ, ಅನೇಕ ವಿಧದಲ್ಲಿ ವಿಧಿ ಪರೀಕ್ಷೆ ತೆಗೆದುಕೊಳ್ಳುತ್ತದೆ, ಯಾವುದಕ್ಕೂ ಜಗ್ಗದೆ, ನಿರಂತರ ಕರ್ಮದಲ್ಲಿ ವಿಶ್ವಾಸವಿಟ್ಟು ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೊ

ಸತ್ಯವೆಂಬುದು ಅಲ್ಲಿ ಸುಳಿಯದು! ಎಲ್ಲಿ ಕಾಮವು ಇರುವದೊ

ಅಲ್ಲಿ ಮುಕ್ತಿಯು ನಾಚಿ ತೋರದು! ಎಲ್ಲಿ ಸುಳಿವುದು ಭೋಗವು

ಅಲ್ಲಿ ತೆರೆಯದು ಮಾಯೆ ಬಾಗಿಲನಲ್ಲಿಹುದು ಭವರೋಗವು

ಎಲ್ಲಿ ನೆಲಸದೊ ಚಾಗವು- ದಿಟ

ವಲ್ಲಿ ಸೇರದು ಯೋಗವು!

ಗಗನವೇ ಮನೆ! ಹಸುರೆ ಹಾಸಿಗೆ! ಮನೆಯು ಸಾಲ್ವುದೆ ಚಾಗಿಗೆ?

ಹಸಿಯೊ, ಬಿಸಿಯೊ? ಬಿದಿಯು ಕೊಟ್ಟಾಹಾರವನ್ನವು ಯೋಗಿಗೆ!

ಏನು ತಿಂದರೆ ಏನು ಕುಡಿದರೆ ಏನು? ಆತ್ಮಗೆ ಕೊರತೆಗೆ?

ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ- ಕೊರತೆಯೆ?

ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸಂನ್ಯಾಸಿ

ಓಂ! ತತ್! ಸತ್! ಓಂ!

ಸಂನ್ಯಾಸ ಗೀತೆಯ ಇಡೀ ಹಾಡಿನ ಸಾರಾಂಶವನ್ನು ಈ ಒಂದು ನುಡಿಯಲ್ಲಿ ನೋಡಬಹುದು, ಕಾಮದ ವಾಂಛೆ ಇದ್ದಲ್ಲಿ ಸತ್ಯ ಸುಳಿಯುವುದಿಲ್ಲ, ಭೋಗದ ಆಸೆ ಇದ್ದಲ್ಲಿ ಮುಕ್ತಿ ದೊರಕುವುದಿಲ್ಲ. ಹಣ ಹಾಗೂ ಹೆಣ್ಣಿನ ಮೋಹವಿದ್ದಲ್ಲಿ ಜೀವನದ ಪರಮ ಸತ್ಯವನ್ನು ಅರಿಯಲು ಸಾಧ್ಯವಾಗದು. ಭಾರತೀಯ ಸಮಾಜದಲ್ಲಿ ಸೇವೆ ಮತ್ತು ತ್ಯಾಗಕ್ಕೆ ಅತ್ಯಂತ ಹೆಚ್ಚಿನ ಗೌರವ ಹಾಗೂ ಮನ್ನಣೆ ಹಾಗಾಗಿ ಎಲ್ಲಿ ತ್ಯಾಗವಿರುವುದಿಲ್ಲವೋ ಅಲ್ಲಿ ಯೋಗವಿರವುದಿಲ್ಲ. ಸಂನ್ಯಾಸಿಯ ಬದುಕು ಪಾರಿವ್ರಾಜಕ ಬದುಕು, ಗಗನವೇ ಮನೆ, ಹಸುರೇ ಹಾಸಿಗೆ, ತಿಂದಿದ್ದೇ ಪ್ರಸಾದ, ಕುಡಿದಿದ್ದೇ ತೀರ್ಥ. ಸಂನ್ಯಾಸಿ ತನ್ನ ಮಿಂಚಿನ ಸಂಚಾರದಿಂದ, ಸಿಡಿಲಿನ ವಾಣಿಯಿಂದ ಜಗತ್ತನ್ನು ಗೆಲ್ಲಬೇಕು ಎಂಬುದು ಸ್ವಾಮೀಜಿಯ ಮನದಾಳದ ಇಂಗಿತ.

ಇಷ್ಟು ಪ್ರಖ್ಯಾತವಾದ ಸಂನ್ಯಾಸ ಗೀತೆಯ ಕುರಿತು ಅನೇಕ ಜನ ತಮ್ಮ ಲೇಖನಗಳಲ್ಲಿ, ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸಂನ್ಯಾಸ ಗೀತೆಯ ಮಹತ್ವ ಹಾಗೂ ಅದರ ಪ್ರಭಾವದ ಬಗ್ಗೆ ಹೆಮ್ಮಯಿಂದ ಹೊಗಳಿದ್ದಾರೆ. ಪೂಜ್ಯ ಶ್ರೀ ಪುರುಷೋತ್ತಮಾನಂದರು ತಮ್ಮ “ವೀರ ಸಂನ್ಯಾಸಿ ವಿವೇಕಾನಂದ” ಕೃತಿಯಲ್ಲಿ ಸಂನ್ಯಾಸ ಗೀತೆಯನ್ನು ಉಲ್ಲೇಖಿಸುತ್ತಾ ಪ್ರತಿ ಭಾರತೀಯನಿಗೆ ಚಾಗಿಯ ಹಾಡು ಪ್ರೇರಣೆಯಾಗಬೇಕು ಎಂದಿದ್ದಾರೆ.

ಖ್ಯಾತ ಲೇಖಕ ಮೋಹಿತ್ ಚಕ್ರವರ್ತಿ 1998 ರಲ್ಲಿ ರಚಿಸಿದ ತಮ್ಮ “Swami Vivekananda- a poetic visionary” ಎಂಬ ಪುಸ್ತಕದಲ್ಲಿ ಸಂನ್ಯಾಸ ಗೀತೆಯ ಕುರಿತು ಈ ರೀತಿ ಹೇಳುತ್ತಾರೆ.

““The Song of Sannyasin”, composed in New York in 1895, is the epitome of Vivekananda’s religious introspection. Quite apart from the utilitarian and segmentary approach to religion more often than not prone to achieving a platform of materialistic superiority, the religion that Vivekananda highlights here is one of the emancipation of man by means of sustained devotion to and involvement in knowledge, truth and freedom. His very opening words of advice to the Sannyasin bring forth a challenging vision of life in terms of religion”

 

“ಸ್ವಾಮಿ ವಿವೇಕಾನಂದರು 1985 ರಲ್ಲಿ ರಚಿಸಿದ ಸಂನ್ಯಾಸ ಗೀತೆಯು ಅವರ ಆಧ್ಯಾತ್ಮಿಕ ಬದುಕಿನ ಆತ್ಮವಿಮರ್ಶೆಯ ಸಾರಾಂಶವಾಗಿದೆ. ಅವರು ಈ ಗೀತೆಯಲ್ಲಿ ಭಾರತೀಯ ಆಧ್ಯಾತ್ಮವು ಕೇವಲ ಉಪಯೋಗಕಾರಿ, ಶ್ರೀಣ್ಯಾತ್ಮಕ, ಮನೋಭಾವದಿಂದ ಕೂಡಿದ ಹಾಗೂ ಕೇವಲ ಲೌಕಿಕ ಅನುಭೂತಿಗಳಿಂದ ಕೂಡಿದ್ದಲ್ಲ ಎಂಬುದನ್ನು ಸಾದರಪಡಿಸುತ್ತಾರೆ. ಸ್ವಾಮಿ ವಿವೆಕಾನಂದರು ಈ ಸಂನ್ಯಾಸ ಗೀತೆಯಲ್ಲಿ ಭಾರತೀಯ ಆಧ್ಯಾತ್ಮದ ಸಹಜ ಗುಣವಾದ ಜ್ಞಾನ, ಸತ್ಯ, ಭಕ್ತಿ ಹಾಗೂ ಮೋಕ್ಷದ ಮಾರ್ಗಗಳ ಕುರಿತು ಖಚಿತವಾಗಿ, ಹೆಮ್ಮೆಯಿಂದ ಸಾರಿ ಹೇಳಿದ್ದಾರೆ”.

ಹಿಮಾಲಯನ್ ಪುಸ್ತಕ ಪ್ರಕಾಶನ 1999 ರಲ್ಲಿÀ ಪ್ರಕಟಿಸಿದ What is Hindusim? ಎಂಬ ಪುಸ್ತಕ ಶ್ರೇಣಿಯಲ್ಲಿ ಸಂನ್ಯಾಸ ಗೀತೆಯ ಉಲ್ಲೇಖ ಈ ರೀತಿ ಇದೆ.

Swami Vivekananda’s “Song of Snnyasin” boldly defines the ideals of Monastic life. Vivekananda and his song have inspired many saints of this Century.

“ಸ್ವಾಮಿ ವಿವೇಕಾನಂದರ ಸಂನ್ಯಾಸ ಗೀತೆಯು ಸಂನ್ಯಾಸಿಯ ಜೀವನ ಹಾಗೂ ಗುಣಧರ್ಮಗಳನ್ನು ವಿವರವಾಗಿ ತಿಳಿಸಿದ್ದಾರೆ, ಸ್ವಾಮಿ ವಿವೇಕಾನಂದ ಹಾಗೂ ಅವರ ಸಂನ್ಯಾಸ ಗೀತೆ ಭಾರತ ಹಾಗೂ ವಿಶ್ವದ ಅನೇಕ ಸಂತರಿಗೆ ಪ್ರೇರಣೆ ನೀಡಿದೆ’.

ಲೇಖಕಿ ಕಲ್ಪನಾ ಮೊಹಪಾತ್ರಾ ಅವರು 1996 ರಲ್ಲಿ ರಚಿಸಿದ “Political Philosophy of Swami Vivekananda” ಎಂಬ ಪುಸ್ತಕದಲ್ಲಿ ಈ ರೀತಿ ಹೊಗಳಿದ್ದಾರೆ.

“Consequently, the profoundness of the personality of the Swami is unchallenged. The “Song of Sannyasin”  is the Bible of Bengal and the great legacy of this saint and mystic, Yogi and Patriot. Te Swami was a world preacher but he was also the child of India. His noble patriotism compared favourably with the feelings of a Mazzini, a Bismark, or an Abraham Lincoln. His dedication to the cause of Aryavarta was supreme. The lectures from Colombo to Almora are the Gita of the present day”.

“ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ಅವರ ಗಹನ ಚಿಂತನೆಗಳು ವಿವಾದೀತ ಹಾಗೂ ಪ್ರಶ್ನಾತೀತ. ಅವರ ಸಂನ್ಯಾಸ ಗೀತೆ ಬಂಗಾಲದ ಬೈಬಲ್‍ನಂತೆ, ಅವರು ಒಬ್ಬ ಯೊಗಿ, ಗುರು, ಸಾಧಕ ಹಾಗೂ ರಾಷ್ಟ್ರಭಕ್ತ ಸಂತನಾಗಿ ಎಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ. ಅವರು ವಿಶ್ವಕ್ಕೆ ಮಾರ್ಗದರ್ಶಕರಾಗಿದ್ದರೂ ತಾಯಿ ಭಾರತಿಯ ಮಗುವಾಗಿದ್ದರು. ಅವರ ಪ್ರಖರ ರಾಷ್ಟ್ರಭಕ್ತಿಯನ್ನು ಮ್ಯಾಝನಿ, ಬಿಸ್ಮಾರ್ಕ ಹಾಗೂ ಅಬ್ರಹಾಂ ಲಿಂಕನ್‍ರಿಗೆ ಹೋಲಿಸಲಾಗುತ್ತದೆ. ಈ ಆರ್ಯಾವರ್ತದ ಪುನರುತ್ಥಾನಕ್ಕಾಗಿ ಅವರ ಪಟ್ಟ ಶ್ರಮ ಶ್ಲಾಘನೀಯ. ಅವರ ‘ಕೊಲಂಬೋದಿಂದ ಅಲ್ಮೋರಾ” ಕೃತಿ ಪ್ರಸ್ತುತ ಕಾಲಮಾನದಲ್ಲಿ ಗೀತೆಗೆ ಸಮನಾಗಿದೆ’.

ಒಟ್ಟಿನಲ್ಲಿ ಸಂನ್ಯಾಸ ಗೀತೆ ಅನೇಕರನ್ನು ಜಾಗೃತಗೊಳಿಸಿದೆ, ಈ ಶತಮಾನದ ಸಾಕಷ್ಟು ಸಂತರನ್ನು ಪ್ರೇರೇಪಿಸಿದೆ, ಸಂನ್ಯಾಸಿಗಳಿಗೆ ಮಾತ್ರವಲ್ಲ ಈ ಹಾಡು ಪ್ರತಿ ದೇಶಭಕ್ತನನ್ನು ಹುರಿದುಂಬಿಸುತ್ತದೆ. ಸ್ವಾಮಿ ವಿವೇಕಾನಂದರ ಮೂಲ ವಿಚಾರಧಾರೆ ಹಾಗೂ ಕುವೆಂಪುರವರ ಶಬ್ದಲಾಲಿತ್ಯದಲ್ಲಿ ಮಿಂದೆದ್ದು ಪಾವನರಾದ ಅನೇಕರು ನಮ್ಮ ನಾಡಿನಲ್ಲಿದ್ದಾರೆ. ಈ ಹಾಡು ಹಲವರ ಜೀನದದ ಕ್ರಮ ಹಾಗೂ ಯೋಚನಾ ಲಹರಿಯನ್ನೇ ಬದಲಿಸಿದೆ. ಸಂನ್ಯಾಸ ಗೀತೆ ಅಥವಾ ಚಾಗಿಯ ಹಾಡು ಈ ರಾಷ್ಟ್ರದ ಅಭ್ಯುದಯ ಹಾಗೂ ಪುನರುತ್ಥಾನದ ಪ್ರಕ್ರಿಯೆಯಲ್ಲಿ ಒಂದು ದಾರಿದೀಪವಾಗಿ ಎಲ್ಲಾ ರಾಷ್ಟ್ರಭಕ್ತರನ್ನು ಪ್ರೇರೇಪಿಸಲಿ ತನ್ಮೂಲಕ ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸಲಿ.

ಸಂನ್ಯಾಸ ಗೀತೆ

ಆಂಗ್ಲ ಮೂಲ: ಸ್ವಾಮಿ ವಿವೇಕಾನಂದರು

ಕನ್ನಡ ಪುನರ್ ಸೃಷ್ಠಿ: ರಾಷ್ಟ್ರಕವಿ ಕುವೆಂಪು

ಏಳು ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ದೂರದಡವಿಯೊಳೆಲ್ಲಿ ಲೌಕಿಕವಿಷಯವಾಸನೆ ಮುಟ್ಟದೊ

ಎಲ್ಲಿ ಗಿರಿಗುಹೆಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ

ಎಲ್ಲಿ ಕಾಮವು ಸುಳಿಯದೊ- ಮೇಣ್

ಎಲ್ಲಿ ಜೀವವು ತಿಳಿಯದೊ

ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ

ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ

ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ

ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೊ

ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ

ಓಂ! ತತ್! ಸತ್! ಓಂ!

ಕುಟ್ಟಿ ಪುಡಿಪುಡಿಮಾಡು ಮಾಯೆಯು ಕಟ್ಟಿಬಿಗಿದಿಹ ಹಗ್ಗವ

ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!

ಮುದ್ದಿಸಲಿ ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು

ಕಬ್ಬಿಣವೊ? ಕಾಂಚನವೊ? ಕಟ್ಟಿದ ಕಣ್ಣಿಯೆ ನಿತ್ಯವು

ಪಾಪ ಪುಣ್ಯಗಳೆಂಬು- ಮಾ

ತ್ಸರ್ಯ ಪ್ರೇಮಗಳೆಂಬವು

ದ್ವಂದ್ವರಾಜ್ಯದ ಧೂರ್ತಚೋರರು ಬಿಟ್ಟು ಕಳೆ ಕಳೆಯವರನು!

ಮೋಹಗೊಳಿಪರು ಬಿಗಿವರಿರಿವರು ಎಚ್ಚರಿಕೆಯಿಂದವರನು

ತಳ್ಳು ದೂರಕೆ ಓ ವಿರಕ್ತನೆ! ಹಾಡು ಚಾಗಿಯ ಹಾಡನು!

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ಹಾಡು ಮುಕ್ತಿಯ ಗಾನವನು ಓ ವೀರ ಸಂನ್ಯಾಸಿ

ಓಂ! ತತ್! ಸತ್! ಓಂ!

ಕತ್ತಲಳಿಯಲಿ ಮಬ್ಬುಕವಿಸುವ ಭವದ ತೃಷ್ಣೆಯು ಬತ್ತಲಿ

ಬಾಳಮೋಹವು ಮರುಮರೀಚಿಕೆ ಮಾಯೆ ಕೆತ್ತಿದ ಪುತ್ತಳಿ

ಜನನದೆಡೆಯಿಂ ಮರಣದೆಡೆಗಾಗೆಳೆವುದೆಮ್ಮನು ದೇಹವು!

ಜನ್ಮ ಜನ್ಮದಿ ಮರಳಿ ಮರಳುವುದೆಮ್ಮ ಬಿಗಿಯಲು ಮೋಹವು!

ತನ್ನ ಜಯಿಸಿದ ಶಕ್ತನು-ಅವ

ನೆಲ್ಲ ಜಯಿಸಿದ ಮುಕ್ತನು

ಎಂಬುದನು ತಿಳಿ ಹಿಂಜರಿಯದಿರು ನೀನು ನಡೆ ನಡೆ ಮುಂದಕೆ

ಗುರಿಯು ದೊರಕುವವರೆಗೆ ನಡೆ ನಡೆ ನೋಡದಿರು ನೀ ಹಿಂದಕೆ

ಏಳು ಮೇಲೇಳೇಳು ಸಾಧುವೆ ಹಾಡು ಚಾಗಿಯ ಹಾಡನು

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ಹಾಡು ಸಿದ್ಧನೆ ಓ ಪ್ರಬುದ್ಧನೆ ಹಾಡು ಸಂನ್ಯಾಸಿ

ಓಂ! ತತ್! ಸತ್! ಓಂ!

ಬೆಳೆಯ ಕೊಯ್ವನು ಬಿತ್ತಿದಾತನು ಪಾಪ ಪಾಪಕೆ ಕಾರಣ

ವೃಕ್ಷ ಕಾರ್ಯಕೆ ಬೀಜ ಕಾರಣ ಪುಣ್ಯ ಪುಣ್ಯಕೆ ಕಾರಣ

ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು

ಕಟ್ಟು ಮೀರಿಹನಾವನಿರುವನು? ಕಟ್ಟು ಕಟ್ಟನೆ ಹೆರುವುದು!

ಎಂದು ಪಂಡಿತರೆಂಬರು-ಮೇಣ್

ತತ್ವದರ್ಶಿಗಳೆಂಬರು!

ಆದೊಡೇನಂತಾತ್ಮವೆಂಬುದು ನಾಮರೂಪಾತೀತವು

ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!

ತತ್ವಮಸಿ ಎಂದರಿತು ಸಾಧುವೆ ಹಾಡು ಚಾಗಿಯ ಹಾಡನು!

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ಸಾರು ಸಿದ್ಧನೆ ವಿಶ್ವವರಿಯಲಿ! ಹಾಡು ಸಂನ್ಯಾಸಿ

ಓಂ! ತತ್! ಸತ್! ಓಂ!

ತಂದೆ ತಾಯಿಯು ಸತಿಯು ಮಕ್ಕಳು ಗೆಳೆಯರೆಂಬುವರರಿಯರು

ಕನಸು ಕಾಣುತಲವರು ಸೊನ್ನೆಯ ಸರ್ವವೆನ್ನುತ ಮೆರೆವರು

ಲಿಂಗವರಿಯದ ಆತ್ಮವಾರಿಗೆ ಮಗುವು? ಆರಿಗೆ ತಾತನು?

ಆರ ಮಿತ್ರನು? ಆರ ಶತ್ರುವು? ಒಂದೆಯಾಗಿರುವಾತನು

ಆತ್ಮವೆಲ್ಲಿಯು ಇರುವುದು- ಮೇಣ್

ಆತ್ಮವೊಂದಾಗಿರುವುದು

ಭೇದವೆಂಬುವ ತೋರಿಕೆಯು ನಮ್ಮಾತ್ಮನಾಶಕೆ ಹೇತುವು

ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು

ದೈರ್ಯದಿಂದಿದನೆಲ್ಲ ರಾಲಿಸೆ ಹಾಡು ಚಾಗಿಯ ಹಾಡನು!

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ಸಾರು ಜೀವನ್ಮುಕ್ತ! ಸಾರೈ ಧೀರ ಸಂನ್ಯಾಸಿ

ಓಂ! ತತ್! ಸತ್! ಓಂ!

ಇರುವುದೊಂದೇ ನಿತ್ಯಮುಕ್ತನು ಸರ್ವಜ್ಞಾನಿಯು ಆತ್ಮನು!

ನಾಮರೂಪಾತೀತನಾತನು ಪಾಪಪುಣ್ಯಾತೀತನು!

ವಿಶ್ವಮಾಯಾಧೀಶನಾತನು ಕನಸು ಕಾಣುವನಾತನು!

ಸಾಕ್ಷಿಯಾತನು ಪ್ರಕೃತಿಜೀವರ ತೆರದಿ ತೋರುವನಾತನು!

ಎಲ್ಲಿ ಮುಕ್ತಿಯ ಹುಡುಕುವೆ?-ಏ

ಕಿಂತು ಸುಮ್ಮನೆ ದುಡುಕುವೆ?

ಇಹವು ತೋರದು ಪರವು ತೋರದು ಗುಡಿಯೊಳದು ಮೈದೋರದು

ವೇದ ತೋರದು ಶಾಸ್ತ್ರ ತೋರದು ಮತವು ಮುಕ್ತಿಯ ತೋರದು!

ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು

ಬರಿದೆ ಶೋಕಿಪುದೇಕೆ? ಬಿಡು ಬಿಡು! ನಿನಗೆ ನೀನೇ ಮೋಸವು!

ಬೇಡ, ಪಾಶವ ಕಡಿದು ಕೈಬಿಡು! ಹಾಡು ಸಂನ್ಯಾಸಿ

ಓಂ! ತತ್! ಸತ್! ಓಂ!

“ಶಾಂತಿ ಸರ್ವರಿಗಿರಲಿ” ಉಲಿಯೈ ಜೀವಜಂತುಗಳಾಳಿಗೆ

ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!

ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ

ನಾಕ ನರಕಗಳಾಸೆಭಯಗಳನೆಲ್ಲ ಮನದಿಂ ದೂಡುವೆ!

ದೇಹ ಬಾಳಲಿ ಬೀಳಲಿ- ಅದು

ಕರ್ಮನದಿಯಲಿ ತೇಲಲಿ!

ಕೆಲರು ಹಾರಗಳಿಂದ ಸಿಂಗರಿಸಿದನು ಪೂಜಿಸಿ ಬಾಗಲಿ

ಕೆಲರು ಕಾಲಿಂದೊದೆದು ನೂಕಲಿ ಹುಡಿಯು ಹುಡಿಯೊಳು ಹೋಗಲಿ!

ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?

ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?

ಪಾಶಗಳ ಕಡಿ! ಬಿಸುಡು ಕಿತ್ತಡಿ! ಹಾಡು ಸಂನ್ಯಾಸಿ

ಓಂ! ತತ್! ಸತ್! ಓಂ!

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೊ

ಸತ್ಯವೆಂಬುದು ಅಲ್ಲಿ ಸುಳಿಯದು! ಎಲ್ಲಿ ಕಾಮವು ಇರುವದೊ

ಅಲ್ಲಿ ಮುಕ್ತಿಯು ನಾಚಿ ತೋರದು! ಎಲ್ಲಿ ಸುಳಿವುದು ಭೋಗವು

ಅಲ್ಲಿ ತೆರೆಯದು ಮಾಯೆ ಬಾಗಿಲನಲ್ಲಿಹುದು ಭವರೋಗವು

ಎಲ್ಲಿ ನೆಲಸದೊ ಚಾಗವು- ದಿಟ

ವಲ್ಲಿ ಸೇರದು ಯೋಗವು!

ಗಗನವೇ ಮನೆ! ಹಸುರೆ ಹಾಸಿಗೆ! ಮನೆಯು ಸಾಲ್ವುದೆ ಚಾಗಿಗೆ?

ಹಸಿಯೊ, ಬಿಸಿಯೊ? ಬಿದಿಯು ಕೊಟ್ಟಾಹಾರವನ್ನವು ಯೋಗಿಗೆ!

ಏನು ತಿಂದರೆ ಏನು ಕುಡಿದರೆ ಏನು? ಆತ್ಮಗೆ ಕೊರತೆಗೆ?

ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ- ಕೊರತೆಯೆ?

ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸಂನ್ಯಾಸಿ

ಓಂ! ತತ್! ಸತ್! ಓಂ!

ನಿಜವನರಿತವರೆಲ್ಲೊ ಕೆಲವರು ನಗುವರುಳಿದವರೆಲ್ಲರೂ

ನಿನ್ನ ಕಂಡರೆ ಹೇ ಮಹಾತ್ಮನೆ! ಕುರುಡರೇನನು ಬಲ್ಲರು?

ಗಣಿಸದವರನು ಹೋಗು ಮುಕ್ತನೆ ನೀನು ಊರಿಂದೂರಿಗೆ

ಸೊಗವ ಬಯಸದೆ ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ

ನಿನ್ನ ಬೆಳಕನು ನೀಡೆಲೈ- ಸಂ

ಸಾರ ಮಾಯೆಯ ದೂಡಲೈ!

ಇಂತು ದಿನದಿನ ಕರ್ಮಶಕ್ತಯು ಮುಗಿವವರೆಗೂ ಸಾಗೆಲೈ!

ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!

ಏಳು ಮೇಲೇಳೇಳು ಸಾಧುವೆ ಹಾಡು ಚಾಗಿಯ ಹಾಡನು!

ತತ್ವಮಸಿ ಎಂದರಿತು ಹಾಡೈ ಧೀರ ಸಂನ್ಯಾಸಿ

ಓಂ! ತತ್! ಸತ್! ಓಂ!

ಆಕರ ಗ್ರಂಥಗಳು:

  • ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ- ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು
  • ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ- ಸ್ವಾಮಿ ಪುರುಷೋತ್ತಮಾನಂದ- ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು
  • ಶಕ್ತಿ ಸಂಜೀವಿನಿ- ಡಾ. ಎಚ್. ಎನ್ ಮುರಳೀಧರ- ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು
  • ಸ್ವಾಮಿ ವಿವೇಕಾನಂದ- ಕುವೆಂಪು- ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು
  • ಅಂತರ್ಜಾಲದ ಅನೇಕ ಮೂಲಗಳು

Featured Image: Bean Inspirer

Disclaimer: The opinions expressed within this article are the personal opinions of the author. IndiaFacts does not assume any responsibility or liability for the accuracy, completeness, suitability, or validity of any information in this article.