Close

ಜಾತ್ಯಾತೀತ ಜಗತ್ತಿನಲ್ಲಿ ಕುಂಭಮೇಳದ ಪೋಷಣೆ ಮತ್ತು ರಕ್ಷಣೆ

ಜಾತ್ಯಾತೀತ ಜಗತ್ತಿನಲ್ಲಿ ಕುಂಭಮೇಳದ ಪೋಷಣೆ ಮತ್ತು ರಕ್ಷಣೆ

ಕುಂಭಮೇಳ ಜಗತ್ತಿನ ಅತ್ಯಂತ ದೊಡ್ಡ, ಪ್ರಾಚೀನ ಮತ್ತು ವೈವಿಧ್ಯಮಯ ಮೇಳವಾದರೂ ಅದು ಇಂದಿನ ಜನರಿಗೆ ವಿಚಿತ್ರವೆನಿಸಬಹುದು. ಇದಕ್ಕೆ ಕಾರಣವೆಂದರೆ ಪ್ರತಿಯೊಂದು ವಿಷಯವನ್ನೂ ಸಹ ತಾರ್ಕಿಕವಾಗಿ ವಿಶ್ಲೇಷಿಸುವ ಮನೋಭಾವ. ಭಾವನೆಗಳ ಜಗತ್ತಿನಲ್ಲಿ ಎಲ್ಲವನ್ನೂ ತರ್ಕದಿಂದ ಅಳೆಯುವುದು ಸಾಧ್ಯವಿಲ್ಲ. ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಜನರು ಕುಂಭಮೇಳವನ್ನು ತಮ್ಮದೇ ಆದ ವಿಶ್ಲೇಷಣೆ ಮತ್ತು ದೃಷ್ಟಿಯಿಂದ ನೋಡುತ್ತಾರೆ. ಸ್ಥ್ರೀತತ್ವ, ಮಾರ್ಕ್ಸಿಸ್ಟ್, ಸಮಾಜವಾದಿ, ಫ್ರಾಯ್ಡ್ ತತ್ವ ಮುಂತಾದವು ಇವುಗಳಲ್ಲಿ ಪ್ರಮುಖ. ಕುಂಭಮೇಳ ಕೆಲವರಿಗೆ ಪವಿತ್ರವಾದರೆ ಇತರರಿಗೆ ಒಂದು ವಿಚಿತ್ರ ಮೂಢನಂಬಿಕೆ, ಅರ್ಥವಿಲ್ಲದ ಮಲಿನ ಮತ್ತು ಸಾಮಾಜಿಕ ಆಚರಣೆ. ಕುಂಭಮೇಳವನ್ನು ಒಂದು ಪ್ರತ್ಯೇಕ ದೃಷ್ಟಿಯಿಂದ ನೋಡಿ ಅರ್ಥೈಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಶಬರಿಮಲೆಯಂತೆ ಆಚರಣೆಯ ಮೂಲ ಉದ್ದೇಶ ಕಳೆದು ಹೋಗುತ್ತದೆ.

ಯಾರಿಗೂ ಕುಂಭಮೇಳ ಯಾವಾಗ ಪ್ರಾರಂಭವಾಯಿತು ಎಂಬುದು ಸರಿಯಾಗಿ ಗೊತ್ತಿಲ್ಲ. ನಮಗೆ ಗೊತ್ತಿರುವ ವಿಷಯವೆಂದರೆ ಕುಂಭಮೇಳ ಪ್ರಾಚೀನವಾದುದು ಮತ್ತು ಹತ್ತು ಸಾವಿರ ವರ್ಷಗಳಿಂದ ಅಡಚಣೆಯಿಲ್ಲದೆ ನಡೆದುಕೊಂಡು ಬಂದಿದೆ. ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ಸರತಿಯಂತೆ ಈ ನಾಲ್ಕು ಸ್ಥಳಗಳಲ್ಲಿ ನಡೆಯುತ್ತದೆ – ಹರಿದ್ವಾರ, ಪ್ರಯಾಗರಾಜ್, ನಾಶಿಕ್, ಮತ್ತು ಉಜ್ಜೈನಿ. ಅಂದರೆ, ಮಹಾ ಕುಂಭಮೇಳ ಈ ನಾಲ್ಕು ಸ್ಥಳಗಳಲ್ಲಿ ಒಂದು ಕಡೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಅರ್ಧ ಕುಂಭಮೇಳ ಹರಿದ್ವಾರ ಮತ್ತು ಪ್ರಯಾಗರಾಜ್‌‌ನಲ್ಲಿ ಪ್ರತಿ ಆರು ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಈ ನಾಲ್ಕು ಸ್ಥಳಗಳಲ್ಲಿನ ನದಿಗಳು – ಹರಿದ್ವಾರದಲ್ಲಿ ಗಂಗೆ ಮತ್ತು ಗಂಗೆಯ ಸಂಗಮ, ಪ್ರಯಾಗರಾಜ್‌‌ನಲ್ಲಿ ಯಮುನಾ ಮತ್ತು ಸರಸ್ವತಿಯ ಸಂಗಮ, ನಾಶಿಕ್‌‌ನಲ್ಲಿ ಗೋದಾವರಿ ಮತ್ತು ಉಜ್ಜೈನಿಯಲ್ಲಿ ಶಿಪ್ರ. ಹರಿದ್ವಾರದ ಕುಂಭಮೇಳ ವಸಂತ ಋತುವಿನಲ್ಲಿ ಬೃಹಸ್ಪತಿ (ಗುರು ಗ್ರಹ) ಕುಂಭ ರಾಶಿಯಲ್ಲಿದ್ದಾಗ ನಡೆಯುತ್ತದೆ, ಅದರಿಂದಲೇ ಕುಂಭಮೇಳ ಎಂಬ ಹೆಸರು. ನಾಶಿಕ್ ಮತ್ತು ಉಜ್ಜೈನಿಯ ಮೇಳಗಳು ಮಳೆಗಾಲದ ಆಸುಪಾಸಿನಲ್ಲಿ ಬೃಹಸ್ಪತಿ ಸಿಂಹ ರಾಶಿಯಲ್ಲಿದ್ದಾಗ ನಡೆಯುತ್ತವೆ, ಅವುಗಳ ಹೆಸರು ಸಿಂಹಸ್ತ ಮೇಳಗಳು. ಪ್ರಯಾಗರಾಜ್‌‌ನಲ್ಲಿ ನಡೆಯುವ ಕುಂಭಮೇಳ ಚಳಿಗಾಲದಲ್ಲಿ ಬೃಹಸ್ಪತಿ ಕೇತು(ಮಾಘ) ರಾಶಿಯಲ್ಲಿದ್ದಾಗ ನಡೆಯುತ್ತದೆ. ಅದರ ಹಿಂದಿನ ಹೆಸರು ಮಾಘ ಮೇಳ. ಈಗ ನಾಲ್ಕೂ ಮೇಳಗಳನ್ನು ಕುಂಭಮೇಳ ಎನ್ನುತ್ತೇವೆ. ಈಗ ಪ್ರಯಾಗರಾಜ್‌‌ನಲ್ಲಿ ನಡೆಯುತ್ತಿರುವ ಅರ್ಧ ಕುಂಭಮೇಳ ಹನ್ನೆರಡು ಕೋಟಿಗಿಂತ ಹೆಚ್ಚು ಜನರನ್ನು ಆಕರ್ಷಿಸಿ ಪ್ರಪಂಚದ ಅತ್ಯಂತ ದೊಡ್ಡ ಧಾರ್ಮಿಕ ಹಬ್ಬವಾಗಿದೆ.

ಆಚರಣೆಗಳ ವೈಚಾರಿಕತೆ

ಕುಂಭಮೇಳ ಸತ್ಸಂಗ, ಪೂಜೆ, ಸೇವೆ ಮತ್ತು ಸ್ನಾನಗಳ ಆಚರಣೆ. ಯೋಗ ಮತ್ತು ಧ್ಯಾನವನ್ನು ಅಭ್ಯಸಿಸುವ ಅನೇಕ ಅಧುನಿಕ ಜಗತ್ತಿನ ಜನರೂ ಸಹ ಈ ಆಚರಣೆಗಳನ್ನು ನಿರ್ಲಕ್ಷಿಸುತ್ತಾರೆ. ಮೂರ್ತಿ ಪೂಜೆಯ ವಿರುದ್ಧ ದನಿಯೆತ್ತಿರುವ ಅನ್ಯಮತೀಯರು ಆಚರಣೆಗಳ ವಿರುದ್ಧವೂ ವಾದಿಸುತ್ತಾರೆ. ಆದ್ದರಿಂದಲೇ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿಯವರು ಮೂರ್ತಿ ಪೂಜೆಯನ್ನು ನಿಷೇಧಿಸಿದರು. ಗಾಂಧಿಜೀ ಸಹ ವಿರೋಧಿಸಿದ್ದರು. ಆದರೆ ಹಿಂದೂ ಶಾಸ್ತ್ರಗಳಲ್ಲಿ ಆಚರಣೆಗಳಿಗೆ ಪ್ರತ್ಯೇಕವಾದ ಉದ್ದೇಶ ಮತ್ತು ಪ್ರಾಮುಖ್ಯತೆಯಿದೆ. ಆಚರಣೆಗಳು ಯೋಗ ಮತ್ತು ಧ್ಯಾನಗಳಂತೆ ಮೋಕ್ಷದ ಕಡೆ ಕರೆದೊಯ್ಯುವ ಪ್ರಕ್ರಿಯೆಯ ಒಂದು ಭಾಗ.

ಹಿಂದೂ ಧರ್ಮದ ಪ್ರಕಾರ ವಾಸ್ತವ ಎಂಬುದು ಸೃಷ್ಟಿಸಲಾಗದ, ಅಳಿಸಲಾಗದ ಮತ್ತು ಸರ್ವಾಂತರ್ಯಾಮಿ ಬ್ರಹ್ಮನ್ ಇಂದ ಕೂಡಿದೆ. ಇದು ತ್ರಿಮೂರ್ತಿಗಳಲ್ಲಿ ಒಂದಾದ ಬ್ರಹ್ನ ಅಲ್ಲ. ಸೃಷ್ಟಿಯ ಎಲ್ಲವೂ ಬ್ರಹ್ಮನ್ ಇಂದ ಮಾಡಲ್ಪಟ್ಟಿದೆ, ಎಲ್ಲವೂ ಅದರಲ್ಲಿಯೇ ಇದ್ದು ಅದರಲ್ಲಿಯೇ ಕೊನೆಗೊಳ್ಳುತ್ತದೆ. ಜಗತ್ತು, ಪ್ರಕೃತಿ ಮತ್ತು ಗಂಡು ಹೆಣ್ಣುಗಳೆಲ್ಲವೂ ಒಂದೇ. ಎಲ್ಲವೂ ಬ್ರಹ್ಮನ್ ಒಳಗೆಯೇ ಇದೆ. ಈಶೋಪನಿಷತ್ತಿನ ಮೊದಲ ಶ್ಲೋಕ ಹೇಳುತ್ತದೆ:

“ಎಲ್ಲವೂ, ಜಗತ್ತಿನಲ್ಲಿ ಚಲಿಸುತ್ತಿರುವ ಎಲ್ಲವೂ, ಚಲಿಸುತ್ತಿರುವ ಜಗತ್ತೂ ಸಹ ಅವನ ಒಳಗೆಯೇ ಇದೆ.”

ಬ್ರಹ್ಮನ್ ತತ್ವದಿಂದಲೇ ಮೋಕ್ಷ ಮತ್ತು ಸಾಕ್ಷಾತ್ಕಾರ ಎಂಬ ವಿಚಾರಗಳು ಬಂದವು. ಮೋಕ್ಷವೆಂದರೆ ಬ್ರಹ್ಮನ್ ಮತ್ತು ತನ್ನ ನಡುವಿನ ಅಂತರ ಕಳೆದು ಒಂದಾಗುವ ಸ್ಥಿತಿ ಎಂಬ ಅರ್ಥವಿದೆ. ಈ ವಿಚಾರ ನಾಲ್ಕು ಉಪನಿಷತ್ತು‌ಗಳಲ್ಲಿ ಹೇಳಲಾಗಿದೆ.

ಪ್ರಜ್ಞಾಂ ಬ್ರಹ್ಮನ್ – ಐತರೇಯೋಪನಿಷತ್ತು ಹೇಳುತ್ತದೆ ಪ್ರಜ್ಞೆಯೇ ಬ್ರಹ್ಮನ್

ಅಯಂ ಆತ್ಮ ಬ್ರಹ್ಮನ್ – ಮಾಂಡುಕ್ಯ ಉಪನಿಷತ್ತು ಹೇಳುತ್ತದೆ ಆತ್ಮ ಮತ್ತು ಪರಮಾತ್ಮದ ಪ್ರಜ್ಞೆ ಒಂದೇ.

ತತ್ ತ್ವಂ ಅಸಿ – ಛಾಂದೋಗ್ಯೋಪನಿಷತ್ತಿನ ಈ ಜನಪ್ರಿಯ ವಾಕ್ಯ ಹೇಳುತ್ತದೆ, ನೀನು ಅದೇ.

ಅಹಂ ಬ್ರಹ್ಮಾಸ್ಮಿ – ಬರಹದಾಣ್ಯಕೊಪನಿಷತ್ತಿನ ಈ ವಾಕ್ಯ ನಾನು ಬ್ರಹ್ಮನ್ ಎಂದು ಹೇಳುತ್ತದೆ.

ಶಾಸ್ತ್ರಗಳಲ್ಲಿ ಮೋಕ್ಷ ಪಡೆಯುವ ಕರ್ಮ (ಆಚರಣೆಗಳು ಮತ್ತು ಪ್ರಾಪಂಚಿಕ ಕೆಲಸಗಳು) ಮತ್ತು ಜ್ಞಾನದ (ಅರಿವು ಮತ್ತು ಧ್ಯಾನ) ಬಗ್ಗೆ ಅನೇಕ ಉಲ್ಲೇಖಗಳಿವೆ. ಈ ಎರಡೂ ಆಚರಣೆಗಳು ಬಾಹ್ಯ ಮತ್ತು ಆಂತರಿಕ ವಿಷಯಗಳ ತರ್ಕದಿಂದ ಕೂಡಿವೆ. ಬಾಹ್ಯ ವಿಷಯಗಳ ಬಗ್ಗೆ ಆಸಕ್ತಿ ತೋರುವವರು ಕೊನೆಯಿಲ್ಲದ ಆಸೆಗಳು ಮತ್ತು ದುಃಖದ ಬಲೆಯಲ್ಲಿ ಬೀಳುತ್ತಾರೆ ಮತ್ತು ಆಂತರಿಕತೆಯ ಆಸಕ್ತಿ ಇರುವವರು ಏಕಾಂತತೆ ಮತ್ತು ಆನಂದವನ್ನು ಪಡೆಯುತ್ತಾರೆ. ಶಾಸ್ತ್ರಗಳು ಜ್ಞಾನ ಮತ್ತು ಕರ್ಮದ ಏಕತೆಯನ್ನು ಸಾರಿ ಹೇಳುತ್ತವೆ.

ಈಶೋಪನಿಷತ್ತಿನ ಹನ್ನೆರಡನೆಯ ಶ್ಲೋಕ ಎಚ್ಚರಿಸುತ್ತದೆ:

“ಬಾಹ್ಯ ಜಗತ್ತನ್ನು ಪೂಜಿಸುವವರು ಕತ್ತಲೆಯಲ್ಲಿ ಬದುಕುತ್ತಾರೆ, ಪ್ರಾಪಂಚಿಕತೆಯಲ್ಲಿ ಬದುಕುವವರು ಮತ್ತಷ್ಟು ಕತ್ತಲೆಗೆ ಒಳಗಾಗುತ್ತಾರೆ.”

ಆಚರಣೆಗಳು ಚಿತ್ತ ಶುದ್ಧತೆಯೊಂದಿಗೆ ಅರಿವನ್ನು ಮೂಡಿಸುತ್ತವೆ. ಅನೆಕಾಗ್ರತೆಯ ಮನಸ್ಸು ಚಿಂತನಶೀಲವಾಗಲಾರದು. ನಾವು ಆಚರಣೆಗಳನ್ನು ಅನುಸರಿಸಿದಾಗ ನಮ್ಮ ಬಾಹ್ಯ ಆಸೆಗಳಿಗೆ ದೂರವಾಗಿ ಪ್ರಾಪಂಚಿಕ ಸುಖಗಳನ್ನು ಬಿಟ್ಟು ಸೇವಾ ಮನೋಭಾವದಿಂದ ಪ್ರಶಾಂತರಾಗುತ್ತೇವೆ. ಪ್ರಶಾಂತ ಮನಸ್ಸಿನ ವ್ಯಕ್ತಿಯು ಉತ್ತಮ ಜ್ಞಾನ ಮತ್ತು ಧ್ಯಾನದ ಆನಂದವನ್ನು ಪಡೆಯುತ್ತಾನೆ. ಕ್ರಿಕೆಟ್ ಆಟಗಾರರು ಮೊದಲು ತಮ್ಮ ಶಾಲೆಯ ತಂಡದಲ್ಲಿ ಭಾಗವಹಿಸಿ ನಂತರ ಜೂನಿಯರ್ ತಂಡ, ರಾಜ್ಯ ತಂಡ, ನಂತರ ದೇಶಕ್ಕಾಗಿ ಆಡುತ್ತಾರೆ. ಹಾಗೆಯೇ ಆಚರಣೆಗಳು ಮೋಕ್ಷದ ದಾರಿಯಲ್ಲಿ ಮೊದಲ ಹೆಜ್ಜೆಗಳು.

ಧ್ಯಾನದ ಪಥದಲ್ಲಿರುವವರು ತಯಾರಿಯಿಲ್ಲದ ಬೇರೆಯವರ ಮೇಲೆ ಒತ್ತಡ ಹೇರಬಾರದು. ಅವರು ಭಗವದ್ಗೀತೆಯಲ್ಲಿ (III.26) ಶ್ರೀಕೃಷ್ಣ ಹೇಳಿದಂತೆ ನಡೆದುಕೊಳ್ಳಬೇಕು.

“ಯಾವುದೇ ಜ್ಞಾನಿಯು ಅರಿವಿಲ್ಲದೆ ಕರ್ಮಗಳನ್ನು ಮಾಡುವವರನ್ನು ಹಾಗೆಯೆ ಬಿಡಬಾರದು, ತನ್ನ ಭಕ್ತಿಯ ಕರ್ಮದಿಂದ ಅವರ ಕಾರ್ಯಗಳನ್ನೂ ಮಾಡಿಸಬೇಕು.”

ಮೂಢ ನಂಬಿಕೆಯೇ ಅಥವಾ ಖಗೋಳ ಶಾಸ್ತ್ರದ ಆಳವಾದ ಜ್ಞಾನವೇ?

ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಮೋಕ್ಷ ಪಡೆಯಬಹುದು ಎಂಬ ನಂಬಿಕೆಯಿದೆ. ಈ ಆಚರಣೆಯನ್ನು ಮೂಢನಂಬಿಕೆ ಎನ್ನುವವರೂ ಇದ್ದಾರೆ. ಈ ಆಚರಣೆಗೆ ತರ್ಕಬದ್ಧವಾದ ವಿಶ್ಲೇಷಣೆ ಇದೆಯೇ ಎಂಬುದನ್ನು ಕೇಳಬೇಕಾಗುತ್ತದೆ. ಸೂರ್ಯ ಶಾಸ್ತ್ರದ ಪ್ರಕಾರ ಪಂಚಭೂತಗಳು ಕುಂಭಮೇಳ ನಡೆಯುವ ಬೇರೆ ಬೇರೆ ಸ್ಥಳಗಳಲ್ಲಿ ಗ್ರಹಗಳ ಆಧಾರದ ಮೇಲೆ ಪ್ರತ್ಯೇಕ ಸಮಯಗಳಲ್ಲಿ ಅತ್ಯಂತ ಸಕ್ರಿಯವಾಗಿರುತ್ತವೆ. ಪಂಚಭೂತಗಳಲ್ಲಿ ನೀರು ಬಹಳಷ್ಟು ಸಮಯ ನೆನೆಪನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇದನ್ನು ಇನ್ನೂ ವಿಜ್ಞಾನ ಸಂಪೂರ್ಣವಾಗಿ ನಂಬದಿದ್ದರೂ ಹೋಮಿಯೋಪತಿ ಇದನ್ನು ನಂಬಿದೆ. ಇದರಂತೆಯೇ ಪ್ರಾಚೀನ ಭಾರತದ ಬಹಳಷ್ಟು ಆಚರಣೆಗಳನ್ನು ಮುಂಚೆ ನಂಬದ ವಿಜ್ಞಾನ ಇಂದು ಒಪ್ಪಿಕೊಳ್ಳುತ್ತದೆ. ಬ್ರಹ್ಮನ್ ಎಂದು ಕರೆಯುವ ದ್ವೈತವಲ್ಲದ ಪ್ರಜ್ಞೆಯು ಇಂದು ವಿಜ್ಞಾನದ ವಿಷಯವಾಗಿದೆ. ಶ್ರದ್ಧಾ ಭಕ್ತಿಯಿಂದ ಮೇಳದಲ್ಲಿ ಸ್ನಾನ ಮಾಡುವುದರಿಂದ ಹಳೆಯ ಸಂಸ್ಕಾರಗಳು ಮತ್ತು ವಾಸನೆಗಳು (ಕರ್ಮಗಳ ಹಿಂದಿನ ಪ್ರಭಾವಗಳು) ತೊಳೆದುಹೋಗಿ ಕರ್ಮದಿಂದ ಮುಕ್ತರಾಗುತ್ತಾರೆ. ಔಷಧೀಯ ಗುಣಗಳು ಮತ್ತು ಏಕತ್ವ ವಾದದಿಂದ ನಮಗೆ ನದಿಗಳು ಪವಿತ್ರವಾದವು. ಇದು ಕುಂಭಮೇಳದ ಪ್ರಾಮುಖ್ಯತೆ. ಇತರೆ ಹಿಂದೂ ಆಚರಣೆಗಳಂತೆಯೇ ಕುಂಭಮೇಳಕ್ಕೂ ಶಾಸ್ತ್ರೀಯ ವಿಶೇಷತೆ ಇದೆ.

ಕುಂಭಮೇಳ ನಲವತ್ತೈದು ದಿನಗಳವರೆಗೆ ನಡೆಯುತ್ತದೆ. ಶಾಸ್ತ್ರದಲ್ಲಿ ಇದಕ್ಕೂ ಕಾರಣವಿದೆ, ಬೃಹಸ್ಪತಿ ಕುಂಭ ರಾಶಿಯಲ್ಲಿ ನಲವತ್ತೈದು ದಿನಗಳ ವರೆಗೆ ಇರುತ್ತಾನೆ.

ಕುಂಭ ಮೇಳದಲ್ಲಿ ಶೈಕ್ಷಣಿಕ ಮತ್ತು ಮಾಧ್ಯಮದವರ ಆಸಕ್ತಿ

ಹಾರ್ವರ್ಡ್ ಕುಂಭ ಮೇಳ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಗೊತ್ತಾಗುವ ವೇಳೆಗೆ ಅದು ಜಾಗರೂಕವಾಗಿರುವ ರಾಜೀವ್ ಮಲ್ಹೋತ್ರ ಅವರ ಕಣ್ಣಿಗೂ ಬಿತ್ತು. Why the Kumbh Mela is at Risk ಎಂಬ ಅವರ 2015ರ ಅಂಕಣದಲ್ಲಿ ಅವರು ಭಾರತೀಯ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯರ ಹಸ್ತಕ್ಷೇಪ ಇದೇ ಮೊದಲಲ್ಲ ಎಂದು ಬರೆದಿದ್ದಾರೆ. ತೊಂದರೆಯಿಲ್ಲದಂತೆ ಇದ್ದ ಈ ವಿಷಯ ಗಂಭೀರವಾಗತೊಡಗಿತು. ಶೈಕ್ಷಣಿಕ ವಲಯದವರು, ಎಡಪಂಥೀಯರು, ಪಾದ್ರಿಗಳು ಮತ್ತು ಸಂಸ್ಥೆಗಳು ಪಾಶ್ಚಿಮಾತ್ಯ ತತ್ವಗಳ ದೃಷ್ಟಿಯಿಂದ ಹಿಂದೂ ಆಚರಣೆಗಳನ್ನು ವಿಶ್ಲೇಷಿಸಿದರೆ ಹೊರತು ಅವುಗಳ ಆಧ್ಯಾತ್ಮಿಕ ಉದ್ದೇಶಗಳಿಗಲ್ಲ. ಇವುಗಳ ಪರಿಣಾಮ ಗೊತ್ತಿರುವುದೇ – ಜಾತಿ ಪದ್ಧತಿ, ಲಿಂಗ ತಾರತಮ್ಯ, ವೈಯುಕ್ತಿಕತೆಯನ್ನು ಮೀರಿದ ಧಾರ್ಮಿಕತೆ, ಪ್ರಾಕೃತಿಕ ಮತ್ತು ಸಾರ್ವಜನಿಕ ಆರೋಗ್ಯ ತೊಂದರೆಗಳು ಹೀಗೆ ಹಲವಾರು ಆಪಾದನೆಗಳು. ತತ್ವಶಾಸ್ತ್ರದ ವಿಷಯ ವಾಸನೆ ಇಲ್ಲದೆ ತಪ್ಪುಗಳನ್ನು ಕಂಡುಹಿಡಿಯುವುದರಿಂದ ಜಾತ್ಯಾತೀತ ಮನೋಭಾವನೆ ಮೊದಲುಗೊಂಡು ಪಾದ್ರಿಗಳ ಪ್ರವೇಶಿಸಲು ಶುರುವಾದರು. ಹಿಂದೂ ದೇವಸ್ಥಾನವಾದ ಶಬರಿಮಲೆಯಲ್ಲಿ ಇತ್ತೀಚಿಗೆ ಲಿಂಗ ತಾರತಮ್ಯ ವಿಷಯ ಮುಗಿಲು ಮುಟ್ಟಿದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯ.

ಹಾರ್ವರ್ಡ್ ಸೌತ್ ಏಶಿಯನ್ ಇನ್ಸ್ಟಿಟ್ಯೂಟ್‌‌ನ ಈ ಅಧ್ಯಯನ ಪ್ರಸ್ತಾಪ ಕುಂಭ ಮೇಳವನ್ನು ವಿಶ್ಲೇಷಿಸುವ ಪರಿ ಇದು.

“ಈ ಮೇಳ ಅಂತರಶಿಕ್ಷಣ ವಿಷಯಗಳಾದ ತೀರ್ಥಯಾತ್ರೆ, ಧಾರ್ಮಿಕ ವಿಷಯ, ಸಾರ್ವಜನಿಕ ಅರೋಗ್ಯ, ಸಂವಹನ, ವ್ಯಾಪಾರ ಮತ್ತು ಮೂಲಸೌಕರ್ಯ ಮೊದಲಾದ ಎಲ್ಲವೂ ಒಂದೇ ಕಡೆ ಬೆರೆತು ಅಧ್ಯಯನ ಮತ್ತು ಮ್ಯಾಪಿಂಗ್ ಮಾಡಬೇಕಾದ ಒಂದು ವಿಷಯವಾಗಿದೆ”

ಅಧ್ಯಯನ ಮಾಡುವ ವಿಷಯಗಳ ಪಟ್ಟಿ ಇಂತಿದೆ.

 1. ಹಲವಾರು ಆರ್ಥಿಕ ಮತ್ತು ಸಾಮಾಜಿಕ ಹಂತಗಳಿಂದ ಬರುವ ಯಾತ್ರಿಗಳನ್ನು ಅಧ್ಯಯನ ಮಾಡುವುದು ಹೇಗೆ? ಯಾತ್ರಿಗಳ ವಿಧಗಳು ಮತ್ತು ಲಿಂಗಗಳ ನಡುವೆ ಇರುವ ವ್ಯತ್ಯಾಸವೇನು?
 2. ರಾಷ್ಟ್ರೀಯತೆ, ಧಾರ್ಮಿಕ ಮತ್ತು ವಯುಕ್ತಿಕ ಹಂತಗಳಲ್ಲಿ ಮೇಳದ ಪಾತ್ರವೇನು?
 3. ಮೇಳದಲ್ಲಿ ಪಾಲ್ಗೊಳ್ಳುವ ಅತಿಹೆಚ್ಚು ಯಾತ್ರಿಗಳು ಯಾವ ಧರ್ಮದವರು? ದೇಶದ ಇತರರ ಮೇಲೆ ಅವರ ಪ್ರಭಾವವೇನು? ಯಾತ್ರಿಗಳ, ಪ್ರವಾಸಿಗಳ, ಮಾಧ್ಯಮದವರ ಮತ್ತು ಆಯೋಜಕರ ಜೊತೆಗಿನ ಸಂಬಂಧವೇನು?
 4. ಸಾರ್ವಜನಿಕ ಅರೋಗ್ಯ ಮತ್ತು ಪರಿಸರ ಮಾಲಿನ್ಯ

ಮಾಧ್ಯಮದವರು ಈ ವಿಷಯವನ್ನು ಎರಡೂ ಕಡೆಯಿಂದ ತೋರಿಸುತ್ತಿದ್ದಾರೆ. ಹಲವಾರು ಜನರು ಮೂಲಸೌಕರ್ಯ ಮತ್ತು ಸವಲತ್ತುಗಳನ್ನು ಹೊಗಳಿದರೆ ಇತರರು ಕೆಟ್ಟ ಭಾವನೆಯನ್ನು ಹರಡುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಬಿಬಿಸಿ ನ್ಯೂಸ್ ಜನವರಿ 14 ರಂದು ಮೂಲಸೌಕರ್ಯ, ಸಾರಿಗೆ ಮತ್ತು ಸೌಕರ್ಯ, ಶೌಚಾಲಯ, ಭದ್ರತೆ, ಆಹಾರ ಮತ್ತು ಅರೋಗ್ಯ ಸೌಲಭ್ಯಗಳನ್ನು ಹೊಗಳಿ ವರದಿ ಮಾಡಿದೆ.

ಬಿಸಿನೆಸ್ ಸ್ಟ್ಯಾಂಡರ್ಡ್ ಎಂಬುವ ಮಾಧ್ಯಮ ಋಣಾತ್ಮಕ ದೃಷ್ಟಿಯಿಂದ ವರದಿ ಮಾಡಿದೆ. Can Kumbh Mela Help Alleviate Uttar Pradesh’s Unemployment Problem ಎಂಬ ಅಂಕಣದಲ್ಲಿ ನಿರುದ್ಯೋಗ ಸಮಸ್ಯೆ ಇರುವುದರಿಂದಲೇ ಇಷ್ಟು ಜನ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿ ಮಾಡಿದೆ. ಕುಂಭದ ಪವಿತ್ರತೆಯನ್ನು ನಿರ್ಲಕ್ಷಿಸಿ ನಿರುದ್ಯೋಗ ಸಮಸ್ಯೆಯನ್ನು ಮುಖ್ಯಾಂಶವೆಂಬಂತೆ ತೋರಿಸಿದೆ.

ಡಿಸೆಂಬರ್ 21ರಂದು ಪ್ರಕಟವಾದ ರೂಟರ್ ಅಂಕಣ Sacred and Political: Over 100 million people to attend Kumbh in January ಹಿಂದೂ ಧಾರ್ಮಿಕ ಚಿಂತನೆಗಳನ್ನು ಪ್ರಮುಖವಾಗಿ ತೋರಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಹಾಗು ಅಲ್ಪಸಂಖ್ಯಾತ ಮುಸ್ಲೀಮರನ್ನು ಕಡೆಗಣಿಸಲು ಬಿಜೆಪಿ ಸರಕಾರ ಕುಂಭಮೇಳವನ್ನು ವೈಭವೀಕರಿಸಿ ಆಚರಿಸಲಾಗುತ್ತಿದೆ ಎಂದು ವರದಿ ಮಾಡಿದೆ. ಸತ್ಯವೇನೆಂದರೆ ಮೇಳದಿಂದ ಯಾವುದೇ ಪಂಥಗಳಿಗೆ ತೊಂದರೆಯಾಗಿಲ್ಲ.

ಇಂಡಿಯನ್ ಎಕ್ಸ್ಪ್ರೆಸ್‌‌ನ ಜನವರಿ 20ರ Those Who Keep Kumbh Clean  ಅಂಕಣದಲ್ಲಿ ಬಡ ಕಾರ್ಮಿಕರು ಧನಿಕ ಯಾತ್ರಿಗಳ ಶುಚಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬರೆದಿದ್ದಾರೆ.

ರಾಜೀವ್ ಮಲ್ಹೋತ್ರ ಅವರು ಪಾದ್ರಿಗಳು ಹೇಗೆ ಹಿಂದೂಗಳ ಮೇಳಗಳಲ್ಲಿ ನುಸುಳುತ್ತಾರೆ ಎಂದು ಎಚ್ಚರಿಸಿದ್ದಾರೆ. ನಾಗಾಲ್ಯಾಂಡ್ ಪೋಸ್ಟ್‌‌ನಲ್ಲಿನ ಅಂಕಣದಲ್ಲಿ ಕ್ರೈಸ್ತರು ಹೇಗೆ ನಾಗಾ ಪಂಥದ ಹೆಸರಿನಲ್ಲಿ ಒಳನುಸುಳುತ್ತಾರೆ ಎಂದು ಹೇಳಲಾಗಿದೆ. ಏಸುವಿನ ಸಂದೇಶ ಪ್ರಚಾರ ಮಾಡುವುದು ಜನ್ಮ ಹಕ್ಕು ಎಂಬಂತೆ ಮತ್ತು ಕುಂಭ ಮೇಳ ಒಂದು ದಿನ ದೊಡ್ಡ ಮತಾಂತರ ಕೇಂದ್ರವಾಗುತ್ತದೆ ಎಂದು ಹೇಳಲಾಗಿದೆ.

ಮತಾಂತರದ ಭಾಗವಾಗಿ ಟೆನ್ನೆಸ್ಸೀ ನ್ಯಾಶ್ವಿಲ್ಲೆ ಅಲ್ಲಿ ಇರುವ ಜೋಶುವ II ಎಂಬ ಚರ್ಚು ಕುಂಭಮೇಳ ನಡೆಯುವ ನಗರಗಳನ್ನು ದತ್ತು ತೆಗೆದುಕೊಂಡಿವೆ ಮತ್ತು ಅಲ್ಲಿನ ಸ್ಥಳೀಯರನ್ನು ಮತಾಂತರಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ. ಇದರಿಂದ ಕುಂಭಮೇಳಕ್ಕೆ ಬರುವ ಯಾತ್ರಿಗಳಿಗೆ ಸಂಕಷ್ಟಗಳನ್ನು ತಂದೊಡ್ಡುವುದು ಅವರ ಮೂಲ ಉದ್ದೇಶ. ಪರಿಸರ ಮಾಲಿನ್ಯದ ವಿಷಯವನ್ನೂ ಸಹ ಅವರು ದೊಡ್ಡ ವಿಷಯವೆಂಬಂತೆ ತೋರಿಸುತ್ತಿದ್ದಾರೆ. ಮಾಧ್ಯಮದ ಒಂದು ವರ್ಗವೂ ಅವರ ಜೊತೆಗಿದ್ದು ಅವರ ಸಹಾಯಕ್ಕೆ ನಿಂತಿದೆ. ಅವರ ಕಾರ್ಯಗಳಿಗೆ ಅಡ್ಡಿಪಡಿಸುವ ಯಾರನ್ನೂ ಬಿಡದೆ ಮೂಲಭೂತವಾದಿ ಎಂಬ ಪಟ್ಟ ಕಟ್ಟಿ ಅವರನ್ನು ಮಾಧ್ಯಮದಲ್ಲಿ ನಿಂದಿಸುತ್ತಾರೆ.

ಕುಂಭಮೇಳಕ್ಕೆ ಧಕ್ಕೆ ತರುವ ವಿಷಯಗಳ ವಿಶ್ಲೇಷಣೆ.

ಮೇಲಿನ ಎಲ್ಲಾ ವಿಷಯಗಳ ಆಧಾರದ ಮೇಲೆ ನಾನು ಕುಂಭಮೇಳಕ್ಕೆ ಧಕ್ಕೆ ತರುವ ಜಾತ್ಯಾತೀತ ಮತ್ತು ಮತಾಂತರಿಗಳ ಉದ್ದೇಶಗಳನ್ನು ಪಟ್ಟಿ ಮಾಡುತ್ತೇನೆ.

 1. ಕುಂಭಮೇಳದ ಆಧ್ಯಾತ್ಮಿಕ ತಿಳುವಳಿಕೆ ಇಲ್ಲದವರು ಅದನ್ನು ಮೂಢನಂಬಿಕೆ ಎಂದು ದೂಷಿಸುತ್ತಾರೆ.
 2. ಏಕತೆಯನ್ನು ಸಾರುವ ಹಿಂದೂ ಧರ್ಮದ ಒಳ ಮರ್ಮವನ್ನು ಅರ್ಥೈಸಿಕೊಳ್ಳದೆ ಜಾತಿ ಪಂಥಗಳನ್ನು ಬೇರ್ಪಡಿಸಿ ಧಾರ್ಮಿಕ ಮೇಳದಲ್ಲಿ ಗಲಭೆ ಸೃಷ್ಟಿಸುವುದು.
 3. ವಯುಕ್ತಿಕತೆಗೆ ಅತ್ಯಂತ ಮಹತ್ವ ಸಾರುವ ಹಿಂದೂ ಧರ್ಮದಲ್ಲಿ ವಯುಕ್ತಿಕತೆಗೆ ಬೆಲೆಯಿಲ್ಲ ಎಂಬ ವಾದ
 4. ಸಾರ್ವಜನಿಕ ಅರೋಗ್ಯ ಮತ್ತು ಪರಿಸರ ಮಾಲಿನ್ಯವನ್ನು ಮೇಳದ ಉದ್ದೇಶಕಿಂತಲೂ ದೊಡ್ಡದಾಗಿ ಬಿಂಬಿಸುವುದು.
 5. ಧಾರ್ಮಿಕ ಚಿಂತನೆಗಳನ್ನು ಗೌರವಿಸದೆ ಕುಂಭಮೇಳಕ್ಕೆ ಪ್ರವೇಶಿಸಿ ಮತಾಂತರ ಮಾಡುವುದು.

ಈಗ ಪ್ರತಿಯೊಂದನ್ನು ವಿಶ್ಲೇಷಿಸೋಣ.

 1. ಕುಂಭಮೇಳದ ಆಧ್ಯಾತ್ಮಿಕ ತಿಳುವಳಿಕೆ ಇಲ್ಲದವರು ಅದನ್ನು ಮೂಢನಂಬಿಕೆ ಎಂದು ದೂಷಿಸುತ್ತಾರೆ

ನಮಗೆ ಗೊತ್ತಿರುವ ಹಾಗೆ ಕುಂಭಮೇಳ ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವ ಆಚರಣೆ. ಶಾಸ್ತ್ರಗಳು ಇದರ ಮಹತ್ವವನ್ನು ಮತ್ತು ಖಗೋಳ ಶಾಸ್ತ್ರದ ಸಂಬಂಧವನ್ನು ಹೇಳುತ್ತಾ ನದಿಗಳಿಗೆ ಪವಿತ್ರತೆ ಹೇಗೆ ಬರುತ್ತೆ ಎಂದು ವಿವರಿಸಿವೆ. ಪವಿತ್ರ ಕಾರ್ಯಗಳಿಗೆ ಮಾಡುವ ಸತ್ಸಂಗದಿಂದ ಧನಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ.

1969ರಲ್ಲಿ ಹಿಪ್ಪಿಗಳ ಕಾಲದಲ್ಲಿ ವುಡ್‌‌ಸ್ಟಾಕ್ ಎಂಬ ಒಂದು ಸಂಗೀತ ಹಬ್ಬವನ್ನು ಆಯೋಜಿಸಿದ್ದರು. ಐದು ಲಕ್ಷಕ್ಕೂ ಹೆಚ್ಚು ಜನ ಈ ಐದು ದಿನದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಬಹಳಷ್ಟು ಸಂಗೀತಗಾರರು ಪ್ರದರ್ಶನ ಕೊಟ್ಟಿದ್ದರು. ವುಡ್‌‌ಸ್ಟಾಕ್ ಒಂದು ಸುಂದರ ಮತ್ತು ಐತಿಹಾಸಿಕ ಹಬ್ಬದಂತೆ ವೈಭವೀಕರಿಸಲಾಯಿತು. ಕುಂಭಮೇಳ ಇದ್ದಕ್ಕಿಂತ ಮುನ್ನೂರು ಪಟ್ಟು ದೊಡ್ಡದು, ಒಂಬತ್ತು ಪಟ್ಟು ಹೆಚ್ಚು ಕಾಲ ನಡೆಯುವ, ಶಾಂತಿ ಸೌಹಾರ್ದತೆಯಿಂದ ಕೂಡಿರುವ ಸಾವಿರಾರು ವರ್ಷಗಳಿಂದ ಬಂದಿರುವ ಹಬ್ಬ. ಕುಂಭಮೇಳವನ್ನು ಈ ದೃಷ್ಟಿಯಿಂದ ನೋಡಿದರೆ ಆಗ ಅಧ್ಯಯನ ಸ್ವಲ್ಪ ಆಧ್ಯಾತ್ಮಿಕ ವಿಷಯಗಳ ಮಹತ್ವದ ಕಡೆ ವಾಲುತ್ತದೆ. ವಿಜ್ಞಾನಿಗಳು ಕುಂಭಮೇಳದ ಸಮಯದಲ್ಲಿ ನದಿಯ ಮಹತ್ವ/ಪಾತ್ರ ಬದಲಾಗುತ್ತದೆಯೇ ಎಂದು ಅಧ್ಯಯನ ನಡೆಸಬಹುದು. ಕುಂಭಮೇಳದಿಂದ ಯಾತ್ರಿಗಳ ಮನಃಸ್ಥಿತಿ ಬದಲಾಗುತ್ತದೆಯೇ ಎಂದು ಅಧ್ಯಯನ ಮಾಡಬಹುದು. ವಯುಕ್ತಿಕ ವರ್ಚಸ್ಸು ಹೆಚ್ಚಾಗುವುದೇ? ಸತ್ವ, ರಜಸ್ಸು, ತಮಸ್ಸುಗಳೆಂಬ ಗುಣಗಳಿಂದ ಆಧ್ಯಾತ್ಮಿಕ ಪ್ರಗತಿ ಅಳೆಯಬಹುದು. ಮನುಷ್ಯನ ಭಾವನಾತ್ಮಕತೆ ಮತ್ತು ಅರೋಗ್ಯ ಹೇಗೆ ಬದಲಾಗುತ್ತದೆ? ಆಧ್ಯಾತ್ಮಿಕ ವಿಷಯಗಳ ಅಧ್ಯಯನ ನಡೆಸುವವರು ಇಂತಹ ಪ್ರಶ್ನೆಗಳ ಉತ್ತರ ಹುಡುಕಬೇಕೆ ಹೊರತು ಜಾತ್ಯಾತೀತದ ವಾದವನ್ನಲ್ಲ.

 1. ಏಕತೆಯನ್ನು ಸಾರುವ ಹಿಂದೂ ಧರ್ಮದ ಒಳ ಮರ್ಮವನ್ನು ಅರ್ಥೈಸಿಕೊಳ್ಳದೆ ಜಾತಿ ಪಂಥಗಳನ್ನು ಬೇರ್ಪಡಿಸಿ ಧಾರ್ಮಿಕ ಮೇಳದಲ್ಲಿ ಗಲಭೆ ಸೃಷ್ಟಿಸುವುದು.

ಕುಂಭಮೇಳದ ಪ್ರಮುಖ ಉದ್ದೇಶ ಏಕತೆ. ಜಾತಿಗಳು, ಪಂಥಗಳು, ಸಾಧುಗಳು, ಗಂಡು ಹೆಣ್ಣಿನ ಬೇಧವಿಲ್ಲದೆ  ಎಲ್ಲ ತರಹದ ಜನರು ಒಟ್ಟಾಗಿ ಸಹಾಯ ಮಾಡಿಕೊಂಡು ಒಂದೇ ಕಡೆ ಸ್ನಾನ ಮಾಡುತ್ತಾರೆ. ಮೇಳವು ಪ್ರಪಂಚದಲ್ಲೇ ವಿವಿಧತೆಯಲ್ಲಿ ಏಕತೆ ಸಾರುವು ಅತ್ಯಂತ ದೊಡ್ಡ ಹಬ್ಬ. ಇಂತಹ ಅದ್ಬುತ ಮೇಳದಲ್ಲಿ ತಪ್ಪು ಹುಡುಕುವವರ ದೃಷ್ಟಿಯಲ್ಲಿ ತೊಂದರೆಯಿದೆಯೇ ಹೊರತು ಮೇಳದಲ್ಲಲ್ಲ. ಹಿಂದಿನ ಕಾಲದಿಂದಲೂ ಹಿಂದೂ ಧರ್ಮವನ್ನು ಜಾತಿ ಪದ್ದತಿಗೆ ಸೀಮಿತ ಮಾಡಿದ್ದರ ಪರಿಣಾಮ ಈಗ ಇಂತಹ ಅದ್ಬುತ ಮೇಳಗಳನ್ನು ಮತ್ತು ಏಕತೆ ಸಾರುವ ಉದ್ದೇಶವನ್ನು ನಿರ್ಲಕ್ಷಿಸಲಾಗಿದೆ.

2017ರಲ್ಲಿ ಯುನೆಸ್ಕೋ ಕುಂಭಮೇಳವು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಹೇಳಿದೆ. ಸರಕಾರೀ ಕಮಿಟೀ ”ಕುಂಭ ಮೇಳವು ಪ್ರಪಂಚದ ಅತಿ ದೊಡ್ಡ ಯಾತ್ರಿಗಳ ಸಮಾವೇಶ – ಹಬ್ಬ. ಪವಿತ್ರ ನದಿಗಳಲ್ಲಿ ಆಚರಣೆಗಳನ್ನು ಒಳಗೊಂಡ ಒಂದು ಧಾರ್ಮಿಕ ಮೇಳ ಮತ್ತು ಅಲ್ಲಿ ಎಲ್ಲಾ ತರಹದ ಜನರು ತಾರತಮ್ಯವಿಲ್ಲದೆ ಸಮಾನವಾಗಿ ಪಾಲ್ಗೊಳ್ಳುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೇ ಇಲ್ಲ. ಧಾರ್ಮಿಕ ಹಬ್ಬ ಪ್ರದರ್ಶಿಸುವ ಏಕತೆ ಮತ್ತು ಸಹಿಷ್ಣುತೆ ಪ್ರಪಂಚಕ್ಕೆ ಮಾದರಿ” ಎಂದಿದೆ.

 1. ಧರ್ಮದಿಂದ ವಯುಕ್ತಿಕತೆಗೆ ಧಕ್ಕೆ

ವಯುಕ್ತಿಕತೆಯ ವಿಷಯಕ್ಕೆ ಬಂದರೆ ಇಲ್ಲಿ ಬೌದ್ಧಿಕವಾದ ತರ್ಕ ಮಾಡಬೇಕಾಗುತ್ತದೆ. ವಿವೇಕಾನಂದರ ಪ್ರಕಾರ ಹಿಂದೂ ಧರ್ಮದ ವಿಶ್ವವ್ಯಾಪಿ ತತ್ವ ಕೆಲವರಿಗೆ ಭಯವನ್ನುಂಟು ಮಾಡುತ್ತದೆ. ಈ ವಾದ ಮಾಡುವ ಜನರು ಇದರಿಂದ ವಯುಕ್ತಿಕತೆಗೆ ಧಕ್ಕೆ ಆಗುವುದಿಲ್ಲವೇ ಎಂದು ಕೇಳುತ್ತಾರೆ. ವಯುಕ್ತಿಕತೆ ಎಂದರೆ ಏನು ಎಂದು ವಿವೇಕಾನಂದರು ಪ್ರಶ್ನಿಸುತ್ತಾರೆ. ವಯುಕ್ತಿಕತೆ ನಿಮ್ಮ ದೇಹದಲ್ಲಿದ್ದರೆ ನಿಮ್ಮ ದೇಹದ ಯಾವುದಾದರು ಒಂದು ಭಾಗ ತುಂಡಾದರೆ ಅದು ಹೋಗುತ್ತದೆ. ಅದು ನಿಮ್ಮ ವ್ಯಕ್ತಿತ್ವದಲ್ಲಿದ್ದರೆ ಕುಡುಕನು ತನ್ನ ವಯುಕ್ತಿಕತೆಗೆ ತೊಂದರೆ ಆಗಬಹುದೆಂದು ಎಂದಿಗೂ ಬದಲಾಗದಿರಬಹುದು. ವಿಶ್ವವ್ಯಾಪಿ ತತ್ವವೇ ನಿಜವಾದ ವಯುಕ್ತಿಕತೆ ಎನ್ನುತ್ತಾರೆ ವಿವೇಕಾನಂದರು. ಮೋಕ್ಷದ ಹಂತದಲ್ಲಿ ಬಹುತ್ವವು ಏಕತೆಯಲ್ಲಿ ವಿಲೀನವಾಗುತ್ತದೆ. ಆದ್ದರಿಂದ ಹಿಂದೂ ಧರ್ಮವು ವಯುಕ್ತಿಕತೆಯಿಂದ ದೂರವಲ್ಲ, ಇನ್ನಷ್ಟು ಹತ್ತಿರ ಹೋಗುತ್ತಿದೆ.

“ನಾವು ಇನ್ನು ಪ್ರತ್ಯೇಕ ವ್ಯಕ್ತಿಗಳಲ್ಲ, ಇನ್ನೂ ವಯುಕ್ತಿಕತೆಗೆ ಕಷ್ಟ ಪಡುತ್ತಿದ್ದೇವೆ, ಇದು ಅನಂತ, ಅದು ಮನುಷ್ಯನ ನಿಜವಾದ ಸ್ವಭಾವ” (CWSV-ಪುಸ್ತಕ 2 ಪುಟ 80)

 1. ಸಂಭ್ರಮಕ್ಕಿಂತ ಸಾರ್ವಜನಿಕ ಅರೋಗ್ಯ ಮತ್ತು ಪರಿಸರ ಮಾಲಿನ್ಯ ದೊಡ್ಡ ಸಮಸ್ಯೆಗಳು

ಸಾವಿರಾರು ವರ್ಷಗಳಿಂದ ಕುಂಭದಲ್ಲಿ ಒಮ್ಮೆಯೂ ಸಹ ದೊಡ್ಡ ಸಂಖ್ಯೆಯಲ್ಲಿ ಜನರು ಅರೋಗ್ಯ ಸಮಸ್ಯೆಗೆ ಒಳಗಾಗಿಲ್ಲ. ವಿಜ್ಞಾನಿಗಳು ನದಿಗಳು ಕಳುಷಿತವಾದರೂ ಅರೋಗ್ಯ ಸಮಸ್ಯೆ ಏಕೆ ಬಂದಿಲ್ಲ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಇರುವ ತೊಂದರೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಚಿಸಿದರೆ ಸ್ವಾಗತಾರ್ಹವೇ ಆದರೆ ಸಂಪ್ರದಾಯವನ್ನು ಅಲ್ಲಗೆಳೆಯುವುದಿದ್ದರೆ ಅದು ಸಮಸ್ಯೆ ಆಗುತ್ತದೆ.

 1. ಮತಾಂತರಿಗಳು ಕುಂಭಮೇಳಕ್ಕೆ ಪ್ರವೇಶಿಸಿ ಮತಾಂತರ ಮಾಡುವ ಪ್ರಯತ್ನ

ಇಲ್ಲಿ ಎರಡು ವಿಷಯಗಳಿವೆ. ಒಂದು – ನಮ್ಮ ನಂಬಿಕೆ ಮಾತ್ರ ಸತ್ಯ ಮತ್ತು ಬೇರೆಯವರನ್ನು ಹೇಗಾದರೂ ಸೆಳೆಯಬೇಕು ಎಂಬ ಕ್ರೈಸ್ತ ನಂಬಿಕೆ. ಎರಡು – ಸಾಮಾಜಿಕ ವಿಷಯ ಮತ್ತು ವಿಶ್ಲೇಷಣೆ.

ಮೊದಲನೆಯ ವಿಷಯಕ್ಕೆ ಸ್ವಾಮೀ ವಿವೇಕಾನಂದರ ಪ್ರಕಾರ ಹೇಳುವುದಾದರೆ ನಮಗೆ ಧರ್ಮದ ಅಗತ್ಯ ಬರುವುದು ಲೌಕಿಕ ವಿಷಯಗಳು ನಮ್ಮ ಜ್ಞಾನ ದಾಹವನ್ನು ತೀರಿಸಲು ಆಗದೆ ಹೋದಾಗ. ನಮಗೆ ಅತ್ಯುನ್ನತ ಜ್ಞಾನ ಬೇಕಾದಾಗ. ಇದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗಿದೆ ಮತ್ತು ಪ್ರತಿಯೊಂದು ಧರ್ಮವೂ ಲೌಕಿಕ ವಿಷಯಗಳಿಗಿಂತ ಉನ್ನತ ಜ್ಞಾನದ ವಿಷಯಗಳನ್ನು ತಿಳಿಸುತ್ತವೆ. ಈ ಧಾರ್ಮಿಕ ಮತ್ತು ಲೌಕಿಕ ವಿಷಯಗಳ ನಡುವ ಲೌಕಿಕ ಜ್ಞಾನ ಗೆಲ್ಲುತ್ತದೆ, ಏಕೆಂದರೆ ಅಲ್ಲಿ ತರ್ಕವಿದೆ. ಸಮಯ ಕಳೆದಂತೆ ಜನರು ನಂಬಿಕೆ ಆಧಾರದ ಮೇಲೆ ನಿಂತಿರುವ ಧರ್ಮಗಳಿಂದ ಅತೃಪ್ತರಾದರು. ಈ ವಿಷಯವನ್ನು ಧರ್ಮಗಳು ಗಂಭೀರವಾಗಿ ಪರಿಗಣಿಸಿಲ್ಲ.

ಧರ್ಮಗಳ ನಡುವೆಯೂ ಶ್ರೇಷ್ಠತೆಯ ವಿಷಯವಾಗಿ ಯುದ್ಧಗಳಾಗಿವೆ. ಆದರೆ ಅವು ಕೊಡುವ ಸಾಕ್ಷ್ಯಗಳು ಸಾಲದು. ನನ್ನ ಪುಸ್ತಕ ಹೇಳುತ್ತದೆ ನನ್ನ ಧರ್ಮ ಶ್ರೇಷ್ಠವಾದುದು, ಎಂಬುವ ವಾದ ಸಾಲದು. ಇದಕ್ಕೆ ಪರಿಹಾರ ಇದೆಯೇ? ಇದೆ, ಧರ್ಮವು ವಿಜ್ಞಾನದಂತೆ ಪುರಾವೆಗಳನ್ನು ಕೊಡಬೇಕು. ಧರ್ಮಗಳು ಇಂತಹ ಯಾವುದೇ ವಿಚಾರಣೆಗೆ ಒಳಪಡಿಸಲು ಸಿದ್ಧವಿರಬೇಕು.

ವಿವೇಕಾನಂದರು ಎರಡು ವಿಷಯಗಳನ್ನು ಹೇಳುತ್ತಾರೆ. ಮೊದಲನೆಯದು – ಪ್ರತ್ಯೇಕವಾದ ಯಾವುದೇ ವಿಷಯ ಸಾಮಾನ್ಯೀಕರಣ ಮಾಡುವಂತಿರಬೇಕು. ಉದಾಹರಣೆಗೆ ಒಂದು ಸೇಬು ಕೆಳಗೆ ಬಿದ್ದರೆ ಅದು ಪ್ರತ್ಯೇಕ ಆದರೆ ಎಲ್ಲ ಸೇಬುಗಳು ಕೆಳಗೆ ಬಿದ್ದರೆ ಅದು ಗುರುತ್ವಾಕರ್ಷಣೆ, ಸಾಮಾನ್ಯೀಕರಣ. ಎರಡನೆಯ ವಿಷಯ – ಯಾವುದೇ ಚಿಂತನೆ ಸ್ವಾಭಾವಿಕವಾಗಿರಬೇಕು. ಸೇಬಿನ ಉದಾಹರಣೆಯಲ್ಲಿ ಮೇಲೆ ಎಸೆದ ಸೇಬು ಕೆಳಗೆ ಬಿದ್ದಿದ್ದು ಭೂತದಿಂದ ಎಂದರೆ ಅದು ಅಸ್ವಾಭಾವಿಕ. ಅದು ಬೌದ್ಧಿಕ ಜನರಿಗೆ ಹಿಡಿಸುವುದಿಲ್ಲ. ಆದರೆ ಗುರುತ್ವಾಕರ್ಷಣೆ ಸ್ವಾಭಾವಿಕ. ವಿಜ್ಞಾನದ ಎಲ್ಲ ವಿಷಯಗಳು ಸ್ವಾಭಾವಿಕ.

ಇದೇ ತರ್ಕವನ್ನು ಅಸ್ವಾಭಾವಿಕ ದೇವರಿರುವ ಕ್ರೈಸ್ತ ಧರ್ಮವನ್ನು ಮತ್ತು ಸ್ವಾಭಾವಿಕ ಪ್ರಜ್ಞೆಯ ಚಿಂತನೆಯ ಹಿಂದೂ ಧರ್ಮದ ವಿಷಯದಲ್ಲಿ ವಿಶ್ಲೇಷಿಸೋಣ. ಕ್ರೈಸ್ತ ಧರ್ಮದ ಪ್ರಕಾರ ದೇವರು ಪ್ರಪಂಚವನ್ನು ಸೃಷ್ಟಿಸಿ ಹೊರಗೆ ಕೂತಿರುತ್ತಾನೆ. ಇಲ್ಲಿ ಸಾಮಾನ್ಯೀಕರಣ ಇಲ್ಲ. ದೇವರು ಸೃಷ್ಟಿಯ ಹೊರಗೆ ಇರುವುದರಿಂದ ಈ ವಾದವು ಒಂದು ಹಂತದಲ್ಲಿ ಕೊನೆಗೊಳ್ಳುತ್ತದೆ. ಆದರೆ ಬ್ರಹ್ಮನ್ ತತ್ವವು ಎಲ್ಲವನ್ನೂ ಸಾಮಾನ್ಯೀಕರಣ ಮಾಡಬಹುದಾದ ತತ್ವ. ಎರಡನೆಯ ವಿಷಯದ ಬಗ್ಗೆ ವಾದಿಸಿದರೆ ಅವರ ಹೊರಗಿನ ದೇವರು ಸೇಬನ್ನು ಕೆಳಗೆ ಎಳೆಯುವ ಭೂತದ ತರಹ ಕಾಣುತ್ತಾನೆ. ಆದರೆ ಬ್ರಹ್ಮನ್ ತತ್ವ ಈ ವಿಷಯದಲ್ಲೂ ಗೆಲ್ಲುತ್ತದೆ. ಈಶೋಪನಿಷತ್ತಿನ ವಾಕ್ಯದಂತೆ ಸೃಷ್ಟಿಯ ಒಳಗೆಯೇ ಬ್ರಹ್ಮನ್ ಇದೆ. ಎಲ್ಲವೂ ಅಲ್ಲಿಂದಲೇ ಹುಟ್ಟಿ, ಅಲ್ಲಿಯೇ ಇದ್ದು ಅದರಲ್ಲಿಯೇ ಕೊನೆಗೊಳ್ಳುತ್ತದೆ.

ತಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುವ ಕ್ರೈಸ್ತ ಧರ್ಮವು ತರ್ಕದಲ್ಲಿ ಸೋಲುತ್ತದೆ ಮತ್ತು ನಾವು ಅದರಿಂದ ದೂರವಿರುವುದು ಒಳ್ಳೆಯದು. ಬೇರೆಯವರನ್ನು ಮತಾಂತರಿಸುವ ಅವರ ಸ್ವಭಾವವೂ ದೋಷಪೂರಿತವಾಗಿದೆ. ಹಿಂದೂ ಧರ್ಮದಲ್ಲಿ ಬೇರೆಯವರ ನಂಬಿಕೆಗಳ ಮೇಲೆ ಯಾವುದೇ ವಿರೋಧವಿಲ್ಲ. ಇಲ್ಲಿ ವಾದವಿರುವುದು ಕ್ರೈಸ್ತ ನಂಬಿಕೆಯ ಶ್ರೇಷ್ಟತೆಯ ಮೇಲೆಯೇ ಹೊರತು ನಂಬಿಕೆಯ ಮೇಲಲ್ಲ.

ಇತಿಹಾಸದಲ್ಲಿ ಕಂಡುಬಂದಂತೆ ಇಂತಹ ಕೊಳ್ಳೆ ಹೊಡೆಯುವ ಮನೋಭಾವ ಸಾಮಾಜಿಕ ಶಾಂತಿಗೆ ಧಕ್ಕೆ ತರುವುದರ ಜೊತೆಗೆ ಯುದ್ಧಗಳನ್ನೂ ಸೃಷ್ಟಿಸಬಲ್ಲದು. ಆದ್ದರಿಂದ ಇಂತಹ ಕೆಟ್ಟ ಮನೋಭಾವ ಕೊನೆಗೊಳ್ಳಬೇಕು. ಧರ್ಮವು ಒಳ್ಳೆಯ ಮಾರ್ಗಗಳಲ್ಲಿ ಇಂತಹ ದಾಳಿಗಳಿಂದ ತನ್ನನ್ನು ಕಾಪಾಡಿಕೊಳ್ಳಲು ನಿಶ್ಚಯಿಸಿದರೆ ಅದು ಸಮರ್ಥನೆಯ ವಿಷಯವೇ.

ಕುಂಭಮೇಳವನ್ನು ಹೇಗೆ ಮತ್ತು ಏಕೆ ಪೋಷಿಸಬೇಕು?

ಕುಂಭಮೇಳವು ಹಿಂದೂ ಧರ್ಮದ ವಿಶ್ವತತ್ವದ ಸೂಕ್ಷ್ಮರೂಪ. ಮೇಳ ಸೃಷ್ಟಿಯ ಏಕತೆ ಹಾಗು ನಕ್ಷತ್ರಗಳ ಮತ್ತು ಜೀವನದ ಸಂಬಂಧವನ್ನು ಸೂಚಿಸುತ್ತದೆ.ಯಾವುದೇ ತಾರತಮ್ಯವಿಲ್ಲದೆ ಏಕತೆಯ ದೊಡ್ಡ ಹಬ್ಬವಾಗಿದೆ. ವುಡ್‌‌ಸ್ಟಾಕ್ ಹಬ್ಬಕ್ಕಿಂತ ಬಹಳಷ್ಟು ದೊಡ್ಡದಾದ ಸಹೋದರತೆ ಮತ್ತು ವೈವಿಧ್ಯತೆಯ ಸ್ವರೂಪವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವ ಅತ್ಯಂತ ದೊಡ್ಡ ಉದಾಹರಣೆಯಾಗಿದೆ. ಈ ಕಾರಣದಿಂದಲೇ ಯುನೆಸ್ಕೋ ಕೆಳಗಿನ ಸಮಿತಿ ಕುಂಭಮೇಳವನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಘೋಷಣೆ ಮಾಡಿದೆ.

ವಿವಿಧ ಚಿಂತನೆಗಳ ದೃಷ್ಟಿಯಿಂದ ಕುಂಭಮೇಳವನ್ನು ವಿಶ್ಲೇಷಿಸುವುದು ಮತ್ತು ಅದರಿಂದ ಉಂಟಾದ ಕೆಟ್ಟ ಅಭಿಪ್ರಾಯಗಳು ಹಿಂದೂಗಳನ್ನು ಚಿಂತಿಸುವಂತೆ ಮಾಡಿದೆ. ನಾವು ಮತ್ತು ನಮ್ಮ ಧರ್ಮ ಏನು ಎಂಬ ಅರಿವಿನೊಂದಿಗೆ ನಾವು ಇಂತಹ ಬೆದರಿಕೆಗಳಿಗೆ ಸ್ಪಷ್ಟವಾಗಿ ಉತ್ತರಿಸಬೇಕಿದೆ. ಮೊದಲನೆಯದಾಗಿ ಹಿಂದೂ ಧರ್ಮದ ಮೇಲೆ ಇದು ಮೊದಲ ದಾಳಿಯಲ್ಲ ಎಂದು ತಿಳಿಯಬೇಕು. ಪ್ರಾಚೀನ ಕಾಲದಲ್ಲಿ ಲೌಕಿಕ ಚಿಂತನೆಯ ಚಾರ್ವಾಕರು ಇಂತಹುದೇ ದಾಳಿ ಮಾಡಿದ್ದರು. ನಂತರ ಕ್ರೈಸ್ತ ಮತ್ತು ಇಸ್ಲಾಮಿನ ದಾಳಿಯನ್ನು ಸಹಿಸಿದೆ ಹಿಂದೂ ಧರ್ಮ. ನಾವು ಇಂದು ಹಿಂದೂ ಧರ್ಮದ ಶಕ್ತಿ ಮತ್ತು ಸಾಮರ್ಥ್ಯಗಳ ಆದಾರದ ಮೇಲೆ ಇಂತಹ ಸವಾಲುಗಳನ್ನು ಎದುರಿಸಬೇಕಾಗಿದೆ.

ಹಿಂದೂ ಧರ್ಮದ ವಿಷಯಗಳು ಸ್ವಾಭಾವಿಕ, ಕಲ್ಪನೆಗಳಲ್ಲ. ಪ್ರಯತ್ನಿಸಿದರೆ ಯಾರಾದರು ಸಾಕ್ಷಾತ್ಕರಿಸಿಕೊಳ್ಳಬಹುದಾದ ತತ್ವಗಳು. ಆದ್ದರಿಂದ ಧರ್ಮವನ್ನು ನಾಶ ಮಾಡಲು ಆಗುವುದಿಲ್ಲ. ಧರ್ಮದ ಉದ್ಧಾರಕ್ಕಾಗಿ ನಮಗೆ ಈ ವಿಷಯದ ಅರಿವಿರಬೇಕು.

ಭೌದ್ದಿಕ ಹಂತದಲ್ಲಿ ಧರ್ಮದ ಸಮರ್ಥನೆ ಮಾಡಲು ವಿಚಾರ ಮಾಡಬೇಕಿದೆ. ನಮ್ಮ ಹಳೆಯ ಮತ್ತು ಆಧುನಿಕ ಋಷಿಗಳಿಂದ ಪ್ರೇರಿತರಾಗಿ ಮತ್ತು ಬುದ್ಧಿ ಶಕ್ತಿಯಿಂದ ಸಮರ್ಥಿಸಿ. ತರ್ಕದಿಂದ ಹಿಂದೂ ವಿಷಯಗಳನ್ನು ವಿಶ್ಲೇಷಿಸಿ ವಾದ ಮಾಡಿ. ಹಿಂದೂ ಧರ್ಮವನ್ನು ವಿವರಿಸಬೇಕಾದರೆ ಆಧ್ಯಾತ್ಮಿಕ ಒಳಾರ್ಥ ತಿಳಿದುಕೊಳ್ಳುವುದು ಅತ್ಯಗತ್ಯ.

ಹಿಂದೂ ಧರ್ಮವನ್ನು ಇಂತಹ ದಾಳಿಗಳಿಂದ ರಕ್ಷಿಸಬೇಕಿದೆ. ಧರ್ಮದ ಹಕ್ಕು ಎಂದರೆ ಇತರೆ ಧರ್ಮಗಳ ಮೇಲಿನ ದಾಳಿ ಎಂದಲ್ಲ. ದಾಳಿಗೆ ಒಳಪಟ್ಟ ಧರ್ಮ ಜಾಗರೂಕತೆಯಿಂದ ಮತ್ತು ಕಾನೂನಿನ ಸಹಾಯ ಪಡೆಯುವ ಹಕ್ಕಿದೆ.

ಪ್ರಪಂಚದ ಪವಿತ್ರ ದೇಶದಲ್ಲಿ ಅತಿದೊಡ್ಡ ಹಬ್ಬ ಹೀಗೆಯೇ ಮುಂದುವರೆಯಬೇಕು ಎನ್ನುವುದಾದರೆ ನಾವೆಲ್ಲರೂ ಒಂದಾಗಿ ಅರಿವಿನಿಂದ ಕುಂಭಮೇಳವನ್ನು ರಕ್ಷಿಸೋಣ ಮತ್ತು ಮುಂದಿನ ಪೀಳಿಗೆಗೆ ನೀಡೋಣ.

ಉಲ್ಲೇಖಗಳು

 1. Bhagawat Gita with commentary by Swami Chinmayananda
 2. Isa Upanishad with commentary by Swami Chinmayananda
 3. Media reports linked in the article
 4. Sankrant Sanu, The Edict of Thessalonica and Attack on Hindu Traditions, Indiafacts.org, 29 August 2016
 5. Dipanjan Roy Chaudhury, UNESCO Recognises Kumbh Mela as India’s Cultural Heritage, Economic Times 8 December 2017
 6. Swami Vivekananda, Complete Works, Books 1 and 2

The article has been translated from English into Kannada by Hemanth Kumar

Disclaimer: The facts and opinions expressed within this article are the personal opinions of the author. IndiaFacts does not assume any responsibility or liability for the accuracy, completeness,suitability,or validity of any information in this article.

Atul Sinha and Gunjan Mohanka

Atul Sinha: Atul Sinha founded and runs a leading Strategic Brand Design Company. His interest in Indic culture and history led him to pursue a PhD program at SVYASA, Bangalore. He writes on Vedanta and Indic Culture. Gunjan Mohanka: Gunjan Mohanka is a Copy Writer and former Creative Director with leading Advertising Agencies. She is the Founder Director of a leading Strategic Brand Design company. An avid media watcher, she is committed to contributing to the renaissance of the Indic civilisation.