Close

ಸಂನ್ಯಾಸ- ಒಂದು ಸಮೀಕ್ಷೆ

ಸಂನ್ಯಾಸ- ಒಂದು ಸಮೀಕ್ಷೆ

ತ್ಯಾಗೇನೈಕೇ ಅಮೃತತ್ವ ಮಾನಶುಃ— ಎಂದು ಉಪನಿಷತ್ತುಗಳು ಘೋಷಿಸುತ್ತವೆ. ವೇದ, ಪುರಾಣ, ರಾಮಾಯಣ ಮಹಾಭಾರತ ಹಾಗೂ ಇತರ ಸಾಹಿತ್ಯಪ್ರಕಾರಗಳಲ್ಲಿ, ಇತಿಹಾಸದಲ್ಲಿ, ಜಾನಪದ ದಾಖಲೆಗಳಲ್ಲಿ ಮಹಾನ್ ತ್ಯಾಗಿಗಳ ಅಭೂತಪೂರ್ವ ಸಾಧನೆಗಳ ಚರಿತ್ರೆಗಳು ದಾಖಲಾಗಿವೆ. ಇಂತಹವರು ನಮ್ಮ ಧರ್ಮ-ಸಂಸ್ಕೃತಿಗಳನ್ನು ಕಟ್ಟಿದವರು. ಇವರ ಜೀವನ-ಸಂದೇಶಗಳ ಸ್ಫೂರ್ತಿ ಇಂದಿಗೂ ಸಾಧಕರಿಗೆ ಮಾರ್ಗದರ್ಶಕಗಳಾಗಿವೆ.

ಸಾಮಾನ್ಯವಾಗಿ ಪರಿಪೂರ್ಣ ಸಂಸಾರತ್ಯಾಗವನ್ನು ’ಸಂನ್ಯಾಸ’ ಎಂದು ಗುರುತಿಸಲಾಗುತ್ತದೆ. ಪ್ರಾಪಂಚಿಕ ಕರ್ಮಗಳಲ್ಲಿ ತೊಡಗಿದ್ದರೂ ಮಾನಸಿಕವಾಗಿ ವಿರಕ್ತಿಯನ್ನು ಬೆಳೆಸಿಕೊಳ್ಳುವ’ಆಂತರಿಕ ಸಂನ್ಯಾಸ’’ವನ್ನು ಭಗವದ್ಗೀತೆ ಬೋಧಿಸುತ್ತದೆ. ಗೃಹಸ್ಥರು ಕರ್ಮಫಲತ್ಯಾಗವನ್ನು ಮಾನಸಿಕವಾಗಿ ಅಭ್ಯಾಸ ಮಾಡಿದರೆ ಸಾಕು. ಆದರೆ ಕಾವಿಯುಟ್ಟು ತನ್ನ ವೈರಾಗ್ಯವನ್ನು ಘೋಷಿಸಿಕೊಂಡಿರುವ ಕಾರಣ ಸಂನ್ಯಾಸಿಯು ಬಾಹ್ಯದಲ್ಲೂ ಅಂತರಂಗದಲ್ಲೂ ತ್ಯಾಗ ಮಾಡಲೇಬೇಕು. ನಿಜವಾದ ಸಂನ್ಯಾಸ ಎನ್ನುವುದು ’ಮಲಗಿದವನ ಕೈಯಿಂದ ಪುಸ್ತಕ ಕಳಚಿ ಬೀಳುವಂತೆ’ ಜೀವಿಯ ಮನಸ್ಸು ಪಕ್ವವಾಗಿ ಸಹಜವಾಗಿ ಆಗಬೇಕು ಎನ್ನುತ್ತಾರೆ ಶ್ರೀರಾಮಕೃಷ್ಣರು. ಈ ಸಹಜ ವೈರಾಗ್ಯ ಸಿದ್ಧಿಸಲಿ ಎಂದೇ ಚತುರಾಶ್ರಮ ಪದ್ಧತಿ ಇರುವುದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಗಳಾದ ಮೇಲೆ ಅನುಭವಪಕ್ವನಾದ ಜೀವಿ ಸಹಜವಾಗಿ ಸಂನ್ಯಾಸಾಶ್ರಮಕ್ಕೆ ಅರ್ಹನಾದಾನು ಎನ್ನುವ ಭಾವ ಇಲ್ಲಿ. ಆದರೆ ಅತ್ಯುಚ್ಚ ಸಂಸ್ಕಾರದ ಪ್ರಥಮಾಧಿಕಾರಿಗಳು ಈ ನಿಯಮಕ್ಕೆ ಅಪವಾದಗಳು, ಅಂತಹವರು ಯಾವ ವಯಸ್ಸಲ್ಲಿ ಬೇಕಾದರೂ ತ್ಯಾಗಮಾಡಬಹುದು.

ನಾಲ್ಕು ಬಗೆಯ ಸಂನ್ಯಾಸಗಳಿವೆ- ವಿದ್ವತ್, ವಿವಿದಿಶಾ, ಮರ್ಕಟ ಮತ್ತು ಆತುರ ಸಂನ್ಯಾಸಗಳು. ಜೀವನಾನುಭವದಿಂದ ಪಕ್ವನಾದ ಜೀವಿಯಲ್ಲಿ ಉಂಟಾಗುವ ಸಹಜ-ವೈರಾಗ್ಯವು ಸಂಸಾರತ್ಯಾಗಕ್ಕೆ ಕಾರಣವಾದಾಗ ಅದು ’ವಿದ್ವತ್ ಸಂನ್ಯಾಸ’. ಜಡಭರತ, ಋಷಭದೇವ, ಬುದ್ಧ, ಶಂಕರಾಚಾರ್ಯ, ರಮಣಮಹರ್ಷಿ, ರಾಮಕೃಷ್ಣ, ಅಕ್ಕಮಹಾದೇವಿ, ಅಲ್ಲಮರು, ಮಹಾವೀರ ಮುಂತಾದವರು ಉದಾಹರಣೆಗಳು. ವಿದ್ವತ್ ಸಂನ್ಯಾಸದಲ್ಲಿ ಆಂತರಿಕ ಪಕ್ವತೆ, ವಿರಕ್ತಿಗಳು ಸಹಜವಾಗಿರುವುದರಿಂದ  ಇವರು ಪತನವಾಗುವುದಿಲ್ಲ. ವಿದ್ವತ್-ಸಂನ್ಯಾಸವು ಒಂದು ಆಂತರಿಕ ಸಿದ್ಧಿಯಾದ್ದರಿಂದ ಇದಕ್ಕೆ ಏಕೈಕ ಯೋಗ್ಯತೆ ಪ್ರಖರ ವೈರಾಗ್ಯವೊಂದೇ. ಇದರಲ್ಲಿ ಲಿಂಗ, ಜಾತಿ, ವರ್ಣ, ವಯಸ್ಸು ಮುಂತಾದ ಯಾವುದೂ ಗಣನೆಗೆ ಬಾರದು. ಇಲ್ಲಿ ಕಾವಿ ತೊಡುವುದೂ ಅನಿವಾರ್ಯವಲ್ಲ. ಇಂತಹವರು ಸರ್ವತಂತ್ರಸ್ವತಂತ್ರರು.

ಸಂನ್ಯಾಸದ ಇಚ್ಛೆಯೂ, ಉತ್ಕಟ ಸಾಧನಾಸಕ್ತಿಯೂ ಇರುವ ಯೋಗ್ಯರನ್ನು ಆಯ್ಕೆಮಾಡಿ ಸಂನ್ಯಾಸಾಶ್ರಮದಲ್ಲಿ ಸೇರಿಸುವುದು ವಿವಿದಿಶಾ-ಸಂನ್ಯಾಸ. ಇದರಲ್ಲಿ ಭಾರತಿ, ಗಿರಿ, ಪುರಿ ಮುಂತಾದ ದಶನಾಮಿಪದ್ಧತಿಯ ಪ್ರಕಾರಗಳೂ ಸೇರಿವೆ. ಇಲ್ಲಿ ಗುರುವು ಶಿಷ್ಯನಿಗೆ ಕಾವಿಬಟ್ಟೆಯನ್ನು ಕೊಟ್ಟು, ಹೊಸನಾಮವನ್ನಿಟ್ಟು, ಸಂನ್ಯಾಸಜೀವನದ ವಿಧಿವಿಧಾನಗಳನ್ನು ನಿರ್ದೇಶಿಸುತ್ತಾರೆ. ಇವರು ಸಂನ್ಯಾಸದ ಘನತೆಯನ್ನರಿತು, ಪಾಲಿಸುತ್ತ, ಸಿದ್ಧಿಗಾಗಿ ಯತ್ನಿಸಬೇಕು. ಇಲ್ಲಿ ಆಯಾ ಸಂಪ್ರದಾಯದಂತೆ ಸಂನ್ಯಾಸಸ್ವೀಕಾರಕ್ಕೆ ವರ್ಣ, ಜಾತಿ, ಲಿಂಗ, ವಯಸ್ಸುಗಳ ಅಧಿಕಾರಭೇದಗಳನ್ನು ಗಣಿಸಲಾಗುತ್ತದೆ. ಸನಾತನಧರ್ಮ, ಬೌದ್ಧಧರ್ಮ, ಜೈನಧರ್ಮಗಳಲ್ಲದೆ ಕ್ರೈಸ್ತರ ರೋಮನ್ ಕ್ಯಾಥೋಲಿಕ್-ನಲ್ಲೂ ಅವರವರದೇ ಆದ ಸಂನ್ಯಾಸಪದ್ಧತಿಗಳಿವೆ.

ಇನ್ನೊಂದು ಮರ್ಕಟ ಸಂನ್ಯಾಸ – ’ಅಶಕ್ತಸ್ತು ಭವೇತ್ ಸಾಧುಃ’—ಎಂಬಂತೆ ಕಷ್ಟಕಾಲ ಬಂದಾಗ ಜೀವನದಲ್ಲಿ ಜುಗುಪ್ಸೆ ತಾಳಿ ’ಸ್ಮಶಾನವೈರಾಗ್ಯ’, ’ಅಭಾವವೈರಾಗ್ಯ’ಗಳನ್ನು ನೆಚ್ಚಿ ಸಂನ್ಯಾಸಿಯಾಗುವುದು. ತಮ್ಮ ತಾತ್ಕಾಲಿಕ ಭಾವವನ್ನೇ ಆಧ್ಯಾತ್ಮಿಕ-ಸಂಸ್ಕಾರ ಎಂದು ಭ್ರಮಿಸಿ ಅಕಾಲದಲ್ಲಿ ಸಂನ್ಯಾಸಕ್ಕೆ ಧುಮುಕುವವರು ಇವರು. ಇಂತಹವರಲ್ಲಿ ಕರ್ಮಸಂನ್ಯಾಸವಿರದು ಬದಲಾಗಿ  ’ಸಂನ್ಯಾಸವೇ ಒಂದು ’ಆಡಂಬರದ ಕರ್ಮ’ವಾಗಿಬಿಡುತ್ತದೆ!

ಮತ್ತೊಂದು ಸಂನ್ಯಾಸವಿದೆ- ಆತುರ ಸಂನ್ಯಾಸ. ಕೆಲವರಿಗೆ ಆಧ್ಯಾತ್ಮಿಕ ಸಾಧನೆಯ ಪ್ರಾಮಾಣಿಕ ಬಯಕೆ ಇದ್ದರೂ, ಜೀವನದಲ್ಲಿ ಅದಕ್ಕಾಗಿ ಹೆಚ್ಚು ಸಮಯ ಕೊಡಲಾಗದಿದ್ದಾಗ, ಅವರು ಮರಣಶಯ್ಯೆಯಲ್ಲಿರುವಾಗ ಆಗಲಾದರೂ ಸಂಪೂರ್ಣವಾಗಿ ದೈವಚಿಂತನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆತುರಸಂನ್ಯಾಸ ಸ್ವೀಕರಿಸಬಹುದು.

ಸಂನ್ಯಾಸ-ಜೀವನವು ಕಠಿಣ ನಿಯಮಾವಳಿಗಳಿಂದ ಕೂಡಿರುವಂತಹದ್ದು. ಸಂನ್ಯಾಸಿಯು ಮೂರು ದಿನಕ್ಕಿಂತ ಹೆಚ್ಚಾಗಿ ಒಂದೆಡೆ ತಂಗಬಾರದು; ಅವನದು ’ತರುತಲವಾಸ ಕರತಲ ಭಿಕ್ಷಾ’ ಜೀವನ; ಯಾರ ಶಾಶ್ವತ ಬಾಂಧವ್ಯವನ್ನೂ ಕಟ್ಟಿಕೊಳ್ಳಬಾರದು; ಜನಜಂಗುಳಿಯಿಂದ ದೂರವಿದ್ದು ಅಧ್ಯಯನ, ಧ್ಯಾನಾದಿಗಳಲ್ಲಿ ತೊಡಗಿರಬೇಕು; ಧನ-ವಸ್ತುಗಳ ಸಂಚಯ ಮಾಡಕೂಡದು; ಭಿಕ್ಷಾಟನೆಯಿಂದ ಜೀವನ ಸಾಗಿಸಬೇಕು, ಕಾಮ-ಕಾಂಚನ-ಕೀರ್ತಿಗಳಾಸಕ್ತಿಯನ್ನು ಸರ್ವಥಾ ವರ್ಜಿಸಬೆಕು. “ಸಂನ್ಯಾಸಿಯಾದವನು ಇಂದ್ರಿಯಜಯಿಯೇ ಆದರೂ ಲೋಕಕ್ಕೆ ಮಾರ್ಗದರ್ಶಕನಾದ್ದರಿಂದ ಸದಾ ಎಚ್ಚರವಾಗಿರಬೇಕು. ಹೆಣ್ಣು ಬೊಂಬೆಯೊಂದು ನೆಲದಲ್ಲಿ ಮಗುಚಿ ಬಿದ್ದಿದ್ದರೂ, ಅದನ್ನು ಕುತೂಹಲದಿಂದ ಕಾಲಲ್ಲೂ ತಿರುಗಿಸಿ ನೋಡಬಾರದು!” ಎಂದು ಎಚ್ಚರಿಸುತ್ತಾರೆ ಶ್ರೀರಾಮಕೃಷ್ಣರು. ಸಂನ್ಯಾಸವ್ರತಧಾರಣೆಯ ಸಂದರ್ಭದಲ್ಲಿ ಜುಟ್ಟು-ಜನಿವಾರಗಳನ್ನು ಕಳಚಿ, ಆತ್ಮಶ್ರಾದ್ಧ ಮಾಡಿಕೊಳ್ಳಬೇಕಾಗುತ್ತಾದೆ. ಹಾಗಾಗಿ ನಿಜವಾದ ಸಂನ್ಯಾಸಿಗೆ ಯಾವ ವರ್ಣಾಶ್ರಮ-ಭೇದವೂ, ಸ್ತ್ರೀಪುರುಷ-ಭೇದವೂ, ಉಚ್ಛನೀಚ-ಭೇದವೂ ಇರಬಾರದು. ಭೇದಭಾವವಿದ್ದಲ್ಲಿ ಅಲ್ಲಿ ’ಸಂನ್ಯಾಸ’ವೇ ಪ್ರಶ್ನಾರ್ಹವಾಗುತ್ತದೆ. ಆದರೆ ಜಾತಿಗಳ ವ್ಯವಸ್ಥೆಯೊಳಗಿರುವ ಮಠದ ಸಂನ್ಯಾಸಿಗಳಾದರೋ ತಮ್ಮ ತಮ್ಮ ಜನಾಂಗಗಳ ಹಾಗೂ ಮಠದ ಪದ್ಧತಿ-ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಹಾಗಾಗಿ ಅವರಿಂದ ಈ ಎಲ್ಲ ನಿಯಮಗಳನ್ನೂ ಪಾಲಿಸುವುದು ಕಷ್ಟಸಾಧ್ಯ, ಅವರಿರುವ ಪರಿಸರ ಮತ್ತು ವ್ಯವಸ್ಥೆ ಅದಕ್ಕೆ ಅವಕಾಶ ಕೊಡುವುದಿಲ್ಲ.

ಇಲ್ಲಿ ಮರ್ಕಟಸಂನ್ಯಾಸ ಎನ್ನುವುದೇ ಅಪಾಯಕಾರಿ. ಇಂದಕ್ಕೆ ವೈರಾಗ್ಯವೇ ಇರಬೇಕು ಎಂದೇನಿಲ್ಲ, ಬೇರೆ ಉದ್ದೇಶಗಳಿರಬಹುದು- ಕಾವಿಯುಟ್ಟಲ್ಲಿ, ಜನ ತಾವಾಗಿಯೇ ಬಂದು ಕೈಮುಗಿದು ದಕ್ಷಿಣೆ ಹಾಕಿ ಪೋಷಿಸುತ್ತಾರೆ ಎಂದೋ, ಸಂನ್ಯಾಸಿಯಾದರೆ ತಮ್ಮ ಕಲ್ಟ್ ನ್ನು ಪ್ರಚಾರ ಮಾಡಲು ಸುಲಭಸಾಧ್ಯ ಎಂದೋ, ಜನಮನ್ನಣೆ ಸುಲಭದಲ್ಲಿ ಸಿಕ್ಕೀತೆಂದೋ, ಕರ್ತವ್ಯಗಳ ಭಾರದಿಂದ ತಪ್ಪಿಸಿಕೊಳ್ಳಬಹುದೆಂದೋ, ನೋವು-ನಿರಾಶೆಗಳನ್ನು ಮರೆತು ಶಾಂತವಾಗಿರಬಹುದೆಂದೋ, ಜೀವನದ ಸವಾಲುಗಳನ್ನು ಎದುರಿಸಲಾಗದಾಗ ಪಲಾಯನ ಮಾಡಲೆಂದೋ, ಜಾತಕದಲ್ಲಿ ’ಸಂನ್ಯಾಸಯೋಗ’ ಇದೆ ಎಂದು ನಂಬಿಯೋ, ಹುಚ್ಚು ಭಾವುಕತೆಯ ಭರದಲ್ಲೋ, ಹೀಗೆ ಅನೇಕ ಉದ್ದೇಶಗಳಿಂದ ಸಂನ್ಯಾಸಿಗಳಾಗಬಹುದು. ಇದಲ್ಲದೆ ಅಪಕ್ವರಾದ ಎಳೆಯರನ್ನು ಸಂನ್ಯಾಸದ ವ್ಯವಸ್ಥೆಯೊಳಗೆ ಅಕಾಲದಲ್ಲಿ ನುಗ್ಗಿಸಿ ’ಪುಣ್ಯ’ ಕಟ್ಟಿಕೊಳ್ಳುವವರೂ ಇದ್ದಾರೆ. ಇಂತಹ ಸಂನ್ಯಾಸಿಗಳು ಮೊದಮೊದಲೇನೋ ನಿಯಮಪಾಲನೆ ಮಾಡಬಹುದು. ಆದರೇ ಕ್ರಮೇಣ ತಮ್ಮ ದೇಹಮನಸ್ಸುಗಳ ಬಯಕೆಗಳ ಬಿರುಗಾಳಿ ಎದ್ದಾಗ ಸಂನ್ಯಾಸ-ನಿಯಮಗಳು ಅವರನ್ನು ಉಸಿರುಗಟ್ಟಿಸಿ ಅವರು “prisoners of the system” ಆಗಿಬಿಡುತ್ತಾರೆ. ಸಂನ್ಯಾಸದ ನಾಟಕ ಸಾಕಾಗುತ್ತ ಬಂದು ಇಂತಹವರು ಕಾಲಾಂತರದಲ್ಲಿ ಸಂನ್ಯಾಸಕ್ಕೇ ’ಸಂನ್ಯಾಸ’ ಕೊಟ್ಟು ಗೃಹಸ್ಥರಾದಾರು! ಅಥವಾ ಸಮಾಜದ ಕಣ್ಣುತಪ್ಪಿಸಿ ತಮ್ಮ ಬಯಕೆಯನ್ನು ಗುಟ್ಟಾಗಿ ಪೂರೈಸಿಕೊಂಡಾರು, ಅಥವಾ ಸಮಾಜಕ್ಕೆ ಹೆದರಿ ಮನಸ್ಸಿನಲ್ಲೇ ಮಂಡಿಗೆ ಮೇಯುತ್ತ ಉಳಿದಾರು. ಒಟ್ಟಿನಲ್ಲಿ ಇಂತಹವರು ಸತ್ವಹೀನರೂ, ಅಪಾಯಕಾರಿಗಳೂ ಆಗುತ್ತ ಸಂನ್ಯಾಸಧರ್ಮಕ್ಕೇ ಕಳಂಕವನ್ನು ತರುತ್ತಾರೆ. ಇವರಿಂದಾಗಿ ಒಳ್ಳೆಯ ಸಂನ್ಯಾಸಿಗಳ ಬಗ್ಗೆಯೂ ಅನ್ಯಾಯವಾಗಿ ಅಗೌರವಭಾವ ಮೂಡುತ್ತದೆ.

ಮಠ, ಪೀಠ ಇತ್ಯಾದಿಗಳು ಮೊದಮೊದಲು ಇರಲಿಲ್ಲ. ಬೌದ್ಧ-ವಿಹಾರಗಳೆ ಬಹುಶಃ ಮೊದಲ ’ಸಂನ್ಯಾಸಿಗಳ ಮನೆ’ಗಳು. ಆ ಬಳಿಕ ಆದಿಶಂಕರಾಚಾರ್ಯರೇ ಮೊದಲಾಗಿ ಎಲ್ಲ ಧರ್ಮ ಬೋಧಕರು ತಮ್ಮ ಶಿಷ್ಯರಿಗೆ ಆಶ್ರಯ ನೀಡಲು, ಧರ್ಮಪ್ರಸಾರ ಮಾಡಲು ಮಠಗಳನ್ನು ಕಟ್ಟಲಾರಂಭಿಸಿದರು. ಹೀಗೆ ಸಾವಿರಾರು ಆಶ್ರಮಗಳು ನಿರ್ಮಾಣವಾಗುತ್ತ ಬಂದವು. ಇಂದು ’ಈತ ಸಂನ್ಯಾಸಿ’ ಎಂದರೆ ಸಾಕು, ’ಯಾವ ಮಠದವರು’?’ ಎನ್ನುವ ಪ್ರಶ್ನೆ ಬಂದೇ ಬರುತ್ತದೆ. ಸರ್ವತಂತ್ರಸ್ವತಂತ್ರ ಪರಿವ್ರಾಜಕರ ಸಂಖ್ಯೆ ಗೌಣವೆ.

ಧರ್ಮಪ್ರಚಾರಕ್ಕಾಗಿ ಜನರ ನಡುವೆ ಮಠ ಕಟ್ಟಿಕೊಂಡು ವಾಸಿಸುವುದು ಒಂದು ವಿಧಾನವಾಗಿದೆ. ಜನರಿಗೆ ಶಾಂತ ಪರಿಸರವನ್ನೂ, ಅಧ್ಯಾತ್ಮ, ಸಂಸ್ಕೃತಿ, ಹಾಗೂ ಸೇವಾವಕಾಶವನ್ನೂ ಒಅದಗಿಸುವ ಪುಣ್ಯಕಾರ್ಯ ಈ ಸಂಸ್ಥೆಗಳಿಂದ ಆಗುತ್ತಲೂ ಇವೆ, ನಿಜೆ. ಆದರೆ ಸತತ ಜನ-ಧನ-ಮನ್ನಣೆ-ವ್ಯವಹಾರಗಳ ನಡುವೆ ಇರುವ ಸಂನ್ಯಾಸಿಗಳಿಗೆ ತಮ್ಮ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಸವಾಲುಗಳು ಹೆಚ್ಚು. ’ಕಾಡಿಗೆ ಕೋಣೆಯಲ್ಲಿ ಎಷ್ಟೇ ಎಚ್ಚರದಿಂದ ನಡೆದರೂ ಒಂದಿಷ್ಟು ಕಪ್ಪು ಅಂಟದಿರದು’ ಎನ್ನುತ್ತಾರೆ ರಾಮಕೃಷ್ಣರು. ಹಾಗಾಗಿ ಸಂನ್ಯಾಸಿಗಳೂ ಆಗಾಗ ನಿರ್ಜನ ಪ್ರದೇಶ- ಏಕಾಂತದಲ್ಲಿದ್ದು ಭಾವಶುದ್ಧಿ, ಆತ್ಮನಿರೀಕ್ಷಣಗಳನ್ನು ಮಾಡಿಕೊಳ್ಳುತ್ತಿರಬೇಕು. ಆದರೆ ಸಂನ್ಯಾಸಿಗಳು ಆಂತರಿಕ ಶೋಧಕ್ಕಾಗಿ ಸಮಯವನ್ನು ಒದಗಿಸಿಕೊಳ್ಳಲಾಗದಷ್ಟು ’busy’ಯಾಗಿಬಿಟ್ಟರೆ, ಅವರ ಸಂನ್ಯಾಸದ ವರ್ಚಸ್ಸು ಕ್ರಮೇಣ ಕುಗ್ಗದಿದ್ದೀತೆ? ತಪಸ್ಸಿನ ಅಭಾವದಿಂದಾಗಿ ಸತ್ವಸಂಪನ್ನ ಸಂನ್ಯಾಸಿಗಳೂ ಕ್ರಮೇಣ ಪತನವಾದರೆ ಆಶ್ಚರ್ಯವಿಲ್ಲ.’ಸಹವಾಸದಿಂದ ಸಂನ್ಯಾಸಿ ಕೆಟ್ಟ’ ಎನ್ನುವುದು ಅದಕ್ಕಾಗಿಯೇ.’ಕೊಳೆ ಬಟ್ಟೆಯಿಂದ ಹೇಗೆ ಕೊಳೆಯನ್ನು ಒರೆಸಲಾಗದೋ’, ಅಂತೆಯೇ ತಪಸ್ಸು ಹಾಗೂ ಮನಶ್ಶುದ್ಧಿಯಿಲ್ಲದ ಸಂನ್ಯಾಸಿ ಸೇವೆ-ಬೋಧನೆಗಳಿಗಿಳಿದರೆ ಅದರಿಂದ ಅವನೂ, ಅವನನ್ನು ನೆಚ್ಚಿ ಬರುವ ಭಕ್ತರೂ ದಾರಿ ತಪ್ಪುವುದು ಖಂಡಿತ.

ಉತ್ತಮ ಗುರುವು ತನ್ನ ಬಳಿಗೆ ತಾವಾಗಿ ಅರಸಿ ಬರುವ ವ್ಯಕ್ತಿಗಳನ್ನು ಬಗೆಬಗೆಯಾಗಿ ಪರೀಕ್ಷಿಸಿ, ಆಯ್ದು ದೀಕ್ಷೆ ಕೊಟ್ಟಾಗ ನಿಷ್ಕಳಂಕ ಮನಸ್ಕರಾದ ಯೋಗ್ಯರೇ ಸಂನ್ಯಾಸಿಗಳಾಗುವ ಸಂಭವ ಹೆಚ್ಚು. ಯೋಗ್ಯಾಯೋಗ್ಯತೆಗಳನ್ನೆಣಿಸದೆ ಸಂಖ್ಯಾಪ್ರೀತಿಗಾಗಿ ಕಂಡಕಂಡವರಿಗೆ ಅಕಾಲದಲ್ಲಿ ಸಂನ್ಯಾಸ ಕೊಡಿಸಿ ಶಿಷ್ಯರನಾಗಿಸಿಕೊಳ್ಳುವುದು ಅಪಾಯಕಾರಿ. ಜೊತೆಗೆ ಮಠ, ಶಿಷ್ಯರು, ಧನ, ಮನ್ನಣೆಗಳ ಕುರಿತಾದ ಮಮಕಾರ ಸಂನ್ಯಾಸಿಯ ಪಾಲಿಗೆ ತ್ಯಾಗದ ಆದರ್ಶಕ್ಕಿಂತ ಮುಖ್ಯವಾದಾಗ ಆತನ ’ಗುರು’ತನವು ’ಲಘು’ವಾಗುತ್ತ ಹೋಗುತ್ತದೆ. ಅಂತಹವರಿಗೆ ಮಠವೇ ಸಂಸಾರವಾಗಿ, ಧಾರ್ಮಿಕಕಲಾಪಗಳೇ ವ್ಯಾಪಾರವಾಗಿ, ಭಕ್ತಸಂಚಯವೇ ಗುರಿಯಾಗಿ, ಜನಮನ್ನಣೆಯೇ ಸಾಫಲ್ಯವೆನಿಸತೊಡಗುತ್ತವೆ. ಆಸ್ತಿಗಾಗಿ, ಶಿಷ್ಯರಿಗಾಗಿ, ಪಟ್ಟಕ್ಕಾಗಿ, ಭಕ್ತರನ್ನು ಒಲಿಸುವುದಕ್ಕಾಗಿ ಪೈಪೋಟಿಗಿಳಿಯುವ, ಒಬ್ಬರನ್ನು ಕಂಡರೊಬ್ಬರಿಗೆ ಆಗದ ಸಂನ್ಯಾಸಿಗಳ ಗೌರವ ಮಣ್ಣುಪಾಲಾಗದಿರದೆ? ತಮ್ಮನ್ನು ನೂರಕ್ಕೆ ನೂರುಪಾಲು ನಂಬಿಬರುವ ಭಕ್ತರನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ದಾಸರನ್ನಾಗಿಸಿಕೊಳ್ಳುವ ಚಾಲಾಕಿತನ, ಅಥವಾ ಲೈಂಗಿಕ ಕಿರುಕುಳದ ಮಟ್ಟಕ್ಕೂ ಕ್ರೌರ್ಯ ತೋರುವ ಪಾಪಬುದ್ಧಿಯು ಗುರುಸ್ಥಾನದಲ್ಲಿರುವ ಸಂನ್ಯಾಸಿಗಳಲ್ಲೇ ಬೆಳೆದರೆ ಅದಕ್ಕಿಂತ ದುಃಖತರವಾದದು ಇನ್ನೇನಿರಲು ಸಾಧ್ಯ?

ಸಂನ್ಯಾಸಿಗಳನ್ನೇ ಸಂಪೂರ್ಣ ದೂಷಿಸುವ ಮುನ್ನ ನಾವು ಅವರ ಬಳಿಗೆ ಸಾಗುವ ಭಕ್ತರನ್ನೂ ಪರಾಂಬರಿಸಬೇಕು. ತನ್ನ ದುಃಖ, ದುಗುಡಗಳನ್ನು ತೋಡಿಕೊಂಡು ಮನಸ್ಸನ್ನು ಹಗುರ ಗೊಳಿಸಿಕೊಳ್ಳುವ ಭರದಲ್ಲಿ, ಇನ್ನೊಬ್ಬರನ್ನೂ ಸಂಪೂರ್ಣ ಅವಲಂಬಿಸಿ, ತಮ್ಮತನವನ್ನೇ ಮರೆಯುವ ಮೂರ್ಖಭಕ್ತರಿರುತ್ತಾರೆ. ತಮಗೆ ಸಿಕ್ಕ ತಾತ್ಕಾಲಿಕ ನೆಮ್ಮದಿಯನ್ನೇ ’ಆಧ್ಯಾತ್ಮಿಕ ಲಾಭ’ ಎಂದು ಭ್ರಮಿಸಿ, ಗುರುಭಕ್ತಿಯ ನೆಪದಲ್ಲಿ ವ್ಯಕ್ತಿಪೂಜೆಗೆ ತೊಡಗುತ್ತಾರೆ. ಸುಲಭದಲ್ಲಿ ಸಿಕ್ಕ ಮನ್ನಣೆಗೆ ಮಾರುಹೋಗಿ ಭಕ್ತರ ಮುಗ್ಧಭಾವವನ್ನು ಅಪಬಳಕೆ ಮಾಡಿಕೊಳ್ಳುವ ಟೆಂಪ್ಟೇಶನ್ ಈ ಅಪಕ್ವ ಗುರುಗಳಿಗೆ ಉಂಟಾಗದಿರದೇ? ಭಾವುಕತೆಯ ಭರದಲ್ಲಿ, ಮುಂದಾಲೋಚನೆಯಿಲ್ಲದೆ, ಪ್ರಶ್ನಿಸದೆ ಪರೀಕ್ಷಿಸದೆ ಬಣ್ಣದ ಮಾತುಗಳ ’ಗುರು’ಗಳಿಗೆ ಮನಸೋತು ಶರಣಾಗುವವರೆ, ಎಚ್ಚರ! “ಗುರುವನ್ನು ಸ್ವೀಕರಿಸುವ ಮುನ್ನ ತ್ರಿಕಾಲಗಳಲ್ಲೂ ಪರೀಕ್ಷಿಸಬೇಕು” ಎನ್ನುತ್ತಾರೆ ಶ್ರೀರಾಮಕೃಷ್ಣರು. ವಿವೇಕವಿಲ್ಲದ ಮುಗ್ಧನಂಬಿಕೆಯಿಂದ ಯಾರನ್ನೋ ’ದೇವರೆಂ’ದು ನಂಬುವ, ಆತ ಕಣ್ಮುಂದೆಯೇ ಆಚರಿಸುವ ಮೋಸ, ಕಪಟ, ಸುಳ್ಳುಗಳನ್ನೂ ಧಾರ್ಮಿಕನೆಲೆಯಲ್ಲಿ ಅರ್ಥೈಸಿ ಸುಮ್ಮನಾಗುವ ಮನೋದಾಸ್ಯಕ್ಕೆ ಬಲಿಯಾಗಿಬಿಟ್ಟೀರಿ! ಇಂತಹ ದುರ್ಬಲರನ್ನು ಯಾವ ದೇವರೂ, ಸಲಹೆಯೂ, ಚಿಕಿತ್ಸೆಯೂ ಸರಿಪಡಿಸಲಾಗದು. ಏಕೆಂದರೆ ಇಂತಹವರಿಗೆ ತಾವಿರುವ ಸ್ಥಿತಿಯು ’ಅಸಹಾಯಕ ಮನೋದಾಸ್ಯ’ ಎನಿಸುವುದಿಲ್ಲ, ಬದಲಾಗಿ ’ಶ್ರೀಗುರುವಿನ ಕೃಪಾವಲಂಬನೆ’ ಎಂಬ ಬ್ರಮೆಯೇ ಇರುತ್ತದೆ. ಭಾವನಾತ್ಮಕ-ದಾಸ್ಯದ ಪರಾಕಾಷ್ಟೆಗೇರಿರುವ ಭಕ್ತರನ್ನು ಅಲ್ಲಿಂದ ವಾಪಾಸು ಕರೆತರುವುದು ತುಂಬ ಕಷ್ಟ. ಹಾಗೆ ಒಂದು ವೇಳೆ ಅವರು ತಾವಾಗಿಯೇ ವಾಪಾಸು ಬರಲು ಯತ್ನಿಸಿದರೂ ಅದು ತುಂಬ ಯಾತನಾಮಯ. ಒಮ್ಮೆ ಮನಸೋತು ಗುರುವಿನಲ್ಲಿ ಸಂಪೂರ್ಣ ಶರಣಾದಮೇಲೆ ಆತನಲ್ಲಿ ಸತ್ಯ, ಧರ್ಮಗಳಿಲ್ಲದಿರುವುದನ್ನು ಗುರುತಿಸಿ, ನಿರಾಕರಿಸಿ ಹೊರಬರಲು ಅಪಾರವಾದ ಧೈರ್ಯ, ಸಹನೆ, ಮುಂದಾಲೋಚನೆ ಬೇಕಾಗುತ್ತದೆ. ನಿಜವನ್ನು ತಿಳಿಯದೆ ’ಗುರುದ್ರೋಹಿ’ ಎಂದು ದೂಷಿಸುವ ಸಮಾಜವನ್ನೂ ಎದುರಿಸುವ ಕೆಚ್ಚೆದೆ ಬೇಕಾಗುತ್ತದೆ. ತನ್ನ ಸಮಯ, ಭಾವ, ತನುಮನಗಳನ್ನು ಮನಃಪೂರ್ವಕವಾಗಿ ಒಪ್ಪಿಸಿದ ಮೇಲೆಯೂ ತನಗಾದದ್ದು ಬರೀ ದ್ರೋಹ ಎಂದು ತಿಳಿದಾಗ ಉಂಟಾಗುವ ದುಃಖ, ಜುಗುಪ್ಸೆ, ವೇದನೆ ಅನುಭವೈಕವೇದ್ಯ.

ಸಂನ್ಯಾಸಿಗಳ ಪ್ರಮಾಣ ಅಗತ್ಯಕ್ಕಿಂತ ಅತಿ ಹೆಚ್ಚಾದರೆ, ಅದು ಸಮಾಜದ ಸಮತೋಲನದ ಮೇಲೆ ಘೋರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸುತ್ತಾರೆ ಸ್ವಾಮಿ ವಿವೇಕಾನಂದರದು- “ಸಂನ್ಯಾಸ ಕಲವರಿಗೇ ಒಪ್ಪುತ್ತದೆ. ಆದರೆ ಎಲ್ಲ ಬಗೆಯ ಸ್ತ್ರೀಪುರುಷರಿಗೂ ಒಮ್ಮೆಲೆ ಸಂನ್ಯಾಸದ ಒಲವು ಮೂಡುವಂತೆ ಬೋಧಿಸಿ, ಶಕ್ತ ಹಾಗೂ ಯೋಗ್ಯ ಮನಸ್ಸಿನ ಸಜ್ಜನರೆಲ್ಲರನ್ನೂ ಸಂನ್ಯಾಸಿಗಳನ್ನಾಗಿಸಿಬಿಟ್ಟಲ್ಲಿ, ಮಿಕ್ಕುಳಿದ ಖಲಜನರೇ ಗೃಹಸ್ಥರಾಗಿ ಸಮಾಜವನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ರಾಷ್ಟ್ರವು ಸತ್ವಹೀನವಾಗುತ್ತ ನಾಶಗೊಳ್ಳುತ್ತದೆ”. ಹಿಂದೆ ಬೌದ್ಧಧರ್ಮದ ಭರದ ಪ್ರಚಾರದ ಸಂದರ್ಭದಲ್ಲೂ ಇದೇ ಅತಿರೇಕವಾಯಿತು ಎನ್ನಲಾಗುತ್ತದೆ.

ಒಟ್ಟಿನಲ್ಲಿ ಸಂನ್ಯಾಸ ಎನ್ನುವುದು ಕತ್ತಿಯ ಅಲುಗಿನ ದಾರಿ. ಸಂನ್ಯಾಸಿಯು ಸದಾ ಎಚ್ಚರವಾಗಿರಬೇಕು. ಜನರ ನಡುವೆ ಚಟುವಟಿಕೆಯಿಂದ ಕೂಡಿರುವವರಂತೂ ಇನ್ನೂ ಎಚ್ಚರವಾಗಿದ್ದು ಆತ್ಮನಿರೀಕ್ಷಣೆ, ಧ್ಯಾನ, ಧ್ಯೇಯಚಿಂತನೆಗಳನ್ನು ಮಾಡುತ್ತಲೇ ಇರಬೇಕು. ಇಲ್ಲದಿದ್ದಲ್ಲಿ ಆತ್ಮವಂಚನೆ ಮತ್ತು ಸಮಾಜದ್ರೋಹದ ಪಾಪ ಅವರಿಂದಾಗುತ್ತದೆ. ಆದರೆ ಸಂನ್ಯಾಸದ ಪರಮೋಚ್ಛ ಆದರ್ಶವನ್ನು ಪರಿಪೂರ್ಣವಾಗಿ ಪಾಲಿಸಿ ಜನ್ಮಸಾರ್ಥಕ ಮಾಡಿಕೊಳ್ಳುವ ಮಹನೀಯರೂ ಅಲ್ಲಲ್ಲಿ ಇರುತ್ತಾರೆ. ಕಪಟಿಗಳನ್ನು ದೂಷಿಸುವ ಭರದಲ್ಲಿ ಇಂತಹ ಪೂಜ್ಯರನ್ನೂ, ಘನತೆವೆತ್ತ ಸಂನ್ಯಾಸಧರ್ಮವನ್ನೂ ಸೇರಿಸಿ ಒಟ್ಟಾರೆ ತಿರಸ್ಕರಿಸುವ ಪಾಪ ಮಾತ್ರ ಯಾರಿಂದಲೂ ಆಗಬಾರದು.

The article was first published in Kannada Prabha, 2013

Featured Image: http://iskcon.us

Disclaimer: The facts and opinions expressed within this article are the personal opinions of the author. IndiaFacts does not assume any responsibility or liability for the accuracy, completeness, suitability, or validity of any information in this article.