Close

ಗುಡಿಯ ಸಂಭ್ರಮ – ಧನಸಹಾಯಕ್ಕಾಗಿ ನಿವೇದನೆ

ಗುಡಿಯ ಸಂಭ್ರಮ – ಧನಸಹಾಯಕ್ಕಾಗಿ ನಿವೇದನೆ

The report has been translated from English to Kannada by Dattaraj Deshapande

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಆರ್ಥಿಕತೆ, ಸಂಸ್ಕೃತಿ, ಮತ್ತು ಜ್ಞಾನವನ್ನು ಬೆಳೆಸುವಲ್ಲಿ ದೇವಸ್ಥಾನಗಳ ಅಮೂಲ್ಯ ಕೊಡುಗೆಯನ್ನು ಕೊಂಡಾಡುವುದು ಕಂಡುಬರುತ್ತದೆ. ಏಕೆಂದರೆ ದೇವಸ್ಥಾನಗಳು ತಮ್ಮೊಳಗಿನ ದೇವತಾ ಸಾನ್ನಿಧ್ಯದ ಮೂಲಕ ದಣಿದ ಹೃದಯಗಳಿಗೆ ಶಾಂತಿಯ, ಅನುಗ್ರಹದ ಸಾಂತ್ವನ ನೀಡುವುದರ ಜೊತೆಗೆ ಜಡವಾಗಿ ಹೋಗಿರುವ ಬುದ್ಧಿಗೆ ಬೇಕಾದ ಜ್ಞಾನದ ಕಿಡಿಯನ್ನು ಹೊತ್ತಿಸುತ್ತವೆ.

ಅದೇ ಸಾಮಾಜಿಕ ತಾಣಗಳಲ್ಲಿ ದೇವಸ್ಥಾನಗಳ ಸುಂದರ ಶಿಲ್ಪ, ಭವನದ, ಗೋಪುರಗಳ ವಿನ್ಯಾಸ ಇತ್ಯಾದಿಗಳ ಉತ್ತಮ ಚಿತ್ರಗಳನ್ನು ಹಾಕುವುನ್ನು ನೋಡುತ್ತಲೇ ಇರುತ್ತೇವೆ. ಕೆಲವರಂತೂ ತಮಗೆ ಹತ್ತಿರವಿರುವ ದೇವಸ್ಥಾನಗಳಿಗೆ ಭೇಟಿ ನೀಡಿದ ಅನುಭವಗಳನ್ನೂ ಹಂಚಿಕೊಳ್ಳುತ್ತಾರೆ. ಅಂತಹ ಅನುಭವ ಕಥನಗಳಲ್ಲಿ ಆಳವಾದ ಆಧ್ಯಾತ್ಮಿಕ ತೃಪ್ತಿಯ ಕಂಪು ಹೊಮ್ಮುತ್ತಿರುತ್ತದೆ. ಈ ಮುಂಚೆ ಕಂಡು ಕೇಳದ ಕಥೆಗಳೆಲ್ಲ ದೇವಸ್ಥಾನದ ಭೇಟಿಯ ಅನುಭವ ಹಂಚಿಕೊಳ್ಳುವವರ ಬರಹಗಳಲ್ಲಿ ಕಾಣುತ್ತವೆ.

ಹಾಗೆ ಹಂಚಿಕೊಂಡ ಅನುಭವ ಮತ್ತು ಚಿತ್ರಗಳನ್ನು ನೋಡುವಾಗ, ಓದುಗನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ, ಇಂತಹ ಭವ್ಯ, ಸುಂದರ ಹಾಗೂ ಶ್ರೀಮಂತ ದೇವಸ್ಥಾನಗಳನ್ನು ಕಟ್ಟುವಾಗ, ನಮ್ಮ ಪೂರ್ವಜರು ಅದೆಂಥಾ ಶ್ರದ್ಧೆ ವಹಿಸಿದ್ದಿರಬಹುದು ? ಕೇವಲ ಉಳಿ ಮತ್ತು ಸುತ್ತಿಗೆ ಕೈಯಲ್ಲಿ ಹಿಡಿದ ಅವರ ಹೃದಯದಲ್ಲಿ ಅದೆಂತಹ ಸಮರ್ಪಣಾ ಭಾವ ಹಾಗೂ ತಾದಾತ್ಮ್ಯತೆ ಇದ್ದಿರಬಹುದು ? ತಮ್ಮ ಜೀವನದ ಎಷ್ಟೋ ಅಮೂಲ್ಯ ಸಮಯ ವ್ಯಯಿಸಿ ಶತಮಾನಗಳ ಕಾಲ ಜನರಿಗೆ ಉಪಕಾರಿ ಆಗುವಂಥ ಕೆಲಸ ಮಾಡಿ ಹೋದರಲ್ಲ, ಅವರೆಂಥ ವ್ಯಕ್ತಿಗಳಿದ್ದಿರಬಹುದು ? ಅವರು ಕೆತ್ತಿದ ಆ ಮೂರ್ತಿಗಳಿಗೆ ಪ್ರಾಣಶಕ್ತಿ ಸುರಿದು ದೇವತೆಯಾಗಿ ಮಾರ್ಪಡಿಸುವ ವಿಜ್ಞಾನ ತಿಳಿದವರು ಅದೆಷ್ಟು ತಪಸ್ವಿಗಳಾಗಿದ್ದಿರಬಹುದು, ಇಂಥವರನ್ನೆಲ್ಲ ಪೋಷಿಸುತ್ತಿದ್ದ ನಮ್ಮ ಪರಂಪರೆ, ಸಾಮಾಜಿಕ ವ್ಯವಸ್ಥೆ ಎಷ್ಟು ಶ್ರೇಷ್ಠವಾದದ್ದಿತ್ತು… ? ಮುಂತಾಗಿ ಆಲೋಚನೆಗಳು ಮೂಡುತ್ತವೆ.

ಆದ್ದರಿಂದ ಇಂತಹ ಪರಂಪರೆಯ ಆ ಅಮೂಲ್ಯ ಕೊಡುಗೆಯಾದ ದೇವಸ್ಥಾನಗಳನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಧರ್ಮಬಧ್ಧ ಕರ್ತವ್ಯವಾಗಿದೆ ಎಂದು ಹೇಳುವುದು ತಪ್ಪಾಗುವುದಿಲ್ಲ. ಆದರೆ, ಈ ಕಾಲದ ಸ್ಥಿತಿಗತಿಗಳ ಪರಿಣಾಮವಾಗಿ ನಾವು ನಮ್ಮ ಪರಂಪರೆಯ ಬಗ್ಗೆ ಮಾಹಿತಿ ಹೊಂದಿರದ ಸ್ಥಿತಿ ತಲುಪಿದ್ದೇವೆ. ಹಾಗಾಗಿಯೇ ಬೆಂಗಳೂರು ನಿವಾಸಿಯಾದ ವಿಜಯಲಕ್ಷ್ಮಿಯವರು ಈ ಸಮಸ್ಯೆಯನ್ನು ಪರಿಹರಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

ವಿಜಯಲಕ್ಷ್ಮಿಯವರು ತಮ್ಮ ಜೊತೆ ಇತರೆ ಕೆಲವರನ್ನು ಸೇರಿಸಿಕೊಂಡು ಹೆರಿಟೇಜ್ ಟ್ರಸ್ಟ್ ಅನ್ನುವ ಲಾಭರಹಿತ ಸಂಸ್ಥೆಯನ್ನು ೧೯೯೪ ರಲ್ಲಿ ನೋಂದಾಯಿಸಿ, ಆ ಸಂಸ್ಥೆಯ ಮೂಲಕ ಸೆಮಿನಾರ್, ವರ್ಕ್ ಶಾಪ್ ಇತ್ಯಾದಿಗಳನ್ನು ಏರ್ಪಡಿಸಿ ಜಾಗೃತಿ ಉಡಿಸುವುದರ ಜೊತೆಗೆ, ಉತ್ಸವಗಳನ್ನೂ ಏರ್ಪಾಡು ಮಾಡಿ ಈ ಭವ್ಯ ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಸಂಸ್ಕೃತಿಯ ಬೇರುಗಳು ನಶಿಸಿ ಹೋಗದಂತೆ ನೀರೆರೆಯುತ್ತಿದ್ದಾರೆ.

ಇದರ ಅಂಗವಾಗಿ 2010 ರಿಂದ ಪ್ರತೀ ವರ್ಷವೂ ಗುಡಿಯ ಸಂಭ್ರಮ- ಎನ್ನುವ ದೇವಸ್ಥಾನಗಳ ಉತ್ಸವ ಹಾಗೂ ಸೃಷ್ಟಿಯ ಸಂಭ್ರಮ ಎನ್ನುವ ಹೆಸರಿನ ಪ್ರಕೃತಿ ಉತ್ಸವ ಈ ಎರಡೂ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ಈ ಎರಡೂ ಉತ್ಸವಗಳು ಪ್ರಕೃತಿ ಆರಾಧನೆ ಹಾಗೂ ದೈವ ಆರಾಧನೆಯ ಮೂಲಕ ಜೀವನ ಹಾಗೂ ಅದಕ್ಕೆ ಬೇಕಾದ ಜ್ಞಾನ ಇವೆರಡನ್ನೂ ನೀಡುವ ಸ್ರೋತಗಳನ್ನು ರಕ್ಷಿಸುವ ಉದ್ದೇಶ ಹೊಂದಿವೆ.

ಪ್ರತೀ ವರ್ಷವೂ ಜನವರಿ ಹಾಗೂ ಫೆಬ್ರುವರಿ ಮಾಸಗಳಲ್ಲಿ ಬೆಂಗಳೂರು ನಗರದ ವಿವಿಧ ದೇವಸ್ಥಾನಗಳಲ್ಲಿ, ಗುಡಿಯ ಸಂಭ್ರಮ ಅನ್ನುವ ಹೆಸರಿನ ದೇವಸ್ಥಾನಗಳ ಉತ್ಸವ ನಡೆಸಲಾಗುತ್ತದೆ. ಹೆರಿಟೇಜ್ ಟ್ರಸ್ಟ್ ನ ಸ್ವಯಂ ಸೇವಕರು ಪ್ರತೀ ವರ್ಷವೂ ಬೇರೆ ಬೇರೆಯದ್ದಾದ ವಿಷಯವನ್ನು (theme) ಆಯ್ದುಕೊಳ್ಳುತ್ತಾರೆ. ಕಳೆದ ವರ್ಷ “ದಿವ್ಯ ಪುಷ್ಪಗಳು” ಎನ್ನುವ ಥೀಮ್ ಹೊಂದಿತ್ತು. ದೇಶದೆಲ್ಲೆಡೆಯಿಂದ ನೂರಾರು ಜನ ಕಲಾವಿದರನ್ನು, ವಿದ್ವಾಂಸರನ್ನು ಒಟ್ಟುಗೂಡಿಸಿ ಐದು ವಾರಾಂತ್ಯಗಳ ಕಾಲದಲ್ಲಿ ಬೆಂಗಳೂರಿನ ಎಂಟು ವಿವಿಧ ಸ್ಥಳಗಳಲ್ಲಿ ಒಟ್ಟು ೨೦ ದೇವಸ್ಥಾನಗಳಲ್ಲಿ ಆಚರಿಸಲಾಯಿತು. ಅದರಲ್ಲಿ ನೃತ್ಯ, ಸಂಗೀತ ಇತ್ಯಾದಿಗಳ ಸಮ್ಮೇಳಕ್ಕೆ ಗುಡಿಗಂಟೆಯ ಹಾಗೂ ದಿವ್ಯ ಮಂತ್ರಘೋಷಗಳ ಹಿಮ್ಮೇಳ ಒದಗಿಸಲಾಗಿತ್ತು.

ಸಮಾಜದ ಎಲ್ಲ ಸ್ತರಕ್ಕೆ ಸೇರಿದ ಜನರಲ್ಲಿ ಈ ದೇವಸ್ಥಾನಗಳು ನಮಗೆ ಸೇರಿದ್ದಾಗಿವೆ, ಇದು ನಮ್ಮದೇ ಪರಂಪರೆಯಾಗಿದೆ, ಇದಕ್ಕೆ ನಾವೇ ಮಾಲೀಕರು, ಹೊಣೆಗಾರೂ ಆಗಿದ್ದೇವೆ ಅನ್ನುವ ಭಾವ, ಹೆಮ್ಮೆ ಹಾಗೂ ಜವಾಬ್ದಾರಿ ಮೂಡಿಸುವುದೇ ಈ ಉತ್ಸವದ ಮೂಲ ಉದ್ದೇಶವಾಗಿದೆ. ಉತ್ಸವ ಮುಗಿಯುವುದರೊಳಗಾಗಿ ಅದರಲ್ಲಿ ಭಾಗವಹಿಸಿದ, ಕಲಾವಿಧರು, ಹೂವಿನ ವ್ಯಾಪಾರಿಗಳು, ಪ್ರೇಕ್ಷಕರು, ಹಾಗೂ ಸಮಾಜದ ಎಲ್ಲರಲ್ಲೂ ಈ ಭಾವ ಮೂಡುವುದನ್ನು ಖಚಿತಪಡಿಸಲು ಸಂಸ್ಥೆಯ ಸದಸ್ಯರು ಶ್ರಮಿಸುತ್ತಾರೆ.

೨೦೧೭ರ ಗುಡಿಯ ಉತ್ಸವದಲ್ಲಿ ಎಲ್ಲ ೨೦ ದೇವಸ್ಥಾನಗಳಲ್ಲಿಯೂ ಆಯಾ ದೇವಸ್ಥಾನಕ್ಕೆ ನಿಯಮಿತವಾಗಿ ಹೂವು ಪೂರೈಕೆ ಮಾಡುವ ಹೂವಿನ ವ್ಯಾಪಾರಿಗಳ ಕೈಯಿಂದ ಉದ್ಘಾಟನೆ ಮಾಡಿಸಲಾಯಿತು. ಹೂವಿನ ಅಲಂಕಾರ ಮಾಡುವ ಕಲಾವಿದರನ್ನು ಅವರು ಆ ದೇವಸ್ತಾನಕ್ಕೆ ಹೊಂದಿರುವ ಸಮರ್ಪಣಾ ಭಾವಕ್ಕೆ ಪ್ರತಿಯಾಗಿ ಸನ್ಮಾನಿಸಲಾಯಿತು. ದೇವಸ್ಥಾನದಲ್ಲಿ ದಿವ್ಯತೆಯನ್ನು ಕಾಯ್ದುಕೊಳ್ಳುವಲ್ಲಿ, ಭಕ್ತನಲ್ಲಿ ಭಕ್ತಿಯನ್ನು ಹೆಚ್ಚಿಸುವಲ್ಲಿ ಹೂವಿನ ಅಲಂಕಾರ ಮಾಡುವವರ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದಾಗಿತ್ತು.

ಹನುಮಂತನಗರದ ಗುಡ್ಡದ ರಾಮಾಂಜನೇಯ ಸ್ವಾಮಿ, ಎಚ್ ಎಸ ಆರ್ ಲೇಔಟ್, ನಂದಿ ತೀರ್ಥ ದೇವಸ್ಥಾನ, ಮಲ್ಲೇಶ್ವರಂ, ಕೋರಮಂಗಲದ ಗಣಪತಿ ದೇವಸ್ಥಾನ, ಬನಶಂಕರಿ ದೇವಸ್ಥಾನ ಇತ್ಯಾದಿ ಸ್ಥಳಗಳಲ್ಲಿ ಆರು ವಾರಗಳ ಕಾಲ ಈ ಉತ್ಸವ ನಡೆಯಿತು.

ಮುಖ್ಯ ವೇದಿಕೆ ಹಾಗೂ ೨೦ ದೇವಸ್ಥಾನಗಳಲ್ಲಿ ಕಲಾವಿದರು ಸಂಗೀತ ನೃತ್ಯಾದಿಗಳ ಪ್ರದರ್ಶನ ನೀಡಿದರು.

ದೇವಸ್ಥಾನಗಳಲ್ಲಿ ಮರೆಯಾಗುತ್ತಿರುವ ದೇವೋಪಚಾರ ವಿಧಾನಗಳನ್ನು ಪುನರುಜ್ಜೀವನಗೊಳಿಸುವುದು ಕಳೆದ ಬಾರಿಯ ಉತ್ಸವದ ಪ್ರಧಾನ ಅಂಶವಾಗಿತ್ತು. ಹಾಗಾಗಿ ಕಲಾವಿದರು ದೇವೋಪಚಾರ ವಿಧಾನಗಳನ್ನೊಳಗೊಂಡ ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ರಸಾನುಭವಕ್ಕೊಳಪಡಿಸಿದರು.

ಈ ವರ್ಷದ ಗುಡಿಯ ಸಂಭ್ರಮವು ಜನೆವರಿ ೨೭ಕ್ಕೆ ಪ್ರಾರಂಭವಾಗುತ್ತದೆ. ಒಂದು ವಾರ ನಡೆಯಲಿರುವ ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀ ದುಷ್ಯಂತ್ ಶ್ರೀಧರ್ ರವರು ಪ್ರತಿದಿನ ಭಾಗವತ ಉಪನ್ಯಾಸ ನೆರವೇರಿಸುತ್ತಾರೆ.
ಸಂಗೀತ ನೃತ್ಯಾದಿ ಕಾರ್ಯಕ್ರಮಗಳು ದಿನವಿಡೀ ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಇದಲ್ಲದೇ ಪ್ರಮುಖ ಆಕರ್ಷಣೆಯಾಗಿ ಸ್ವಾಮಿ ಸ್ವಾತ್ಮಬೋಧಾನಂದರಿಂದ ಭಾಗವತ ಚಿಂತನ ಎಂಬ ವಿಶೇಷ ಕಾರ್ಯಕ್ರಮವೂ ನಡೆಯಲಿದೆ.

ಈ ರೀತಿಯಾದ ಕಾರ್ಯಕ್ರಮಗಳಿಂದಾಗಿ ಗುಡಿಯ ಸಂಭ್ರಮವು ಕ್ರಮೇಣ ಬೆಂಗಳೂರು ನಗರದ ಪ್ರಜೆಗಳೆಲ್ಲ ಹೆಮ್ಮೆ ಪಡುವಂತಹ, ಸಾಂಸ್ಕೃತಿಕ ಔನ್ನತ್ಯದ ಸಂದೇಶ ಹರಡುವಂತಹ ಪ್ರಮುಖ ಮೈಲಿಗಲ್ಲಾಗುತ್ತ ಸಾಗಿದೆ.

ಪ್ರತೀ ವರ್ಷದ ವಿವಿಧ ವಿಷಯಾಧಾರಿತ ಉತ್ಸವಗಳ ಮೂಲಕ ವಿಜಯಲಕ್ಷ್ಮಿಯವರು ಜನರಲ್ಲಿ ಪರಂಪರೆಯಡೆಗೆ ಚೈತನ್ಯ ಮೂಡಿಸುತ್ತ ಸಾಗಿದ್ದಾರೆ. ಜೀವನದಲ್ಲಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆತ್ಯಂತಿಕ ಸತ್ಯದ ಹುಡುಕಾಟ ನಡೆಸುತ್ತಾರೆ. ಆದರೆ ಸತ್ಯದ ಸ್ಥಾಪನೆಗಾಗಿ ನಿಷ್ಠೆಯಿಂದ ನಡೆಸುವ ಎಲ್ಲ ಕಾರ್ಯವೂ ನಮ್ಮನ್ನು ಆ ಸತ್ಯಕ್ಕೆ ಹತ್ತಿರ ಕೊಂಡೊಯ್ಯುತ್ತದೆ. ಧರ್ಮವೇ ಸತ್ಯದ ಹುಡುಕಾಟದ ಸರಿಯಾದ ಮಾರ್ಗವಾಗಿದ್ದು ಅದರ ಮೂಲಕವೇ ಆ ಸಾಕ್ಷಾತ್ಕಾರ ಸುಲಭತರವಾಗಿರುತ್ತದೆ. ಹಾಗಾಗಿ ಎಲ್ಲ ರೀತಿಯ ಅಡೆತಡೆ, ಸಮಸ್ಯೆ, ನಿರಾದರವನ್ನು ಹಿಮ್ಮೆಟ್ಟಿಸಿ ನಮ್ಮ ಪರಂಪರೆಯ ಪುನರುಜ್ಜೀವನ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಆ ಕರ್ತವ್ಯದಲ್ಲಿ ನಿರಂತರ ಶ್ರಮಿಸುವುವವರ ಬಲ ಹೆಚ್ಚಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ಗುಡಿಯ ಸಂಭ್ರಮ ೨೦೧೮ ರ ಬಜೆಟ್ ವಿವರಗಳು

ಭಾರತೀಯ ಮೌಲ್ಯಗಳ ಅಧ್ಯಯನಕಾರರ ಸಂಘಟನೆಯಾದ ಇಂಡಿಕ್ ಅಕ್ಯಾಡೆಮಿ ಎಂಬ ಸಂಸ್ಥೆಯ ವತಿಯಿಂದ ಈಗಾಗಲೇ ಈ ಉತ್ಸವಕ್ಕಾಗಿ ಒಂದು ಲಕ್ಷ ರೂಪಾಯಿಗಳ ಸಹಕಾರ ನೀಡಿದೆ. ಆದರೆ ಈ ಉತ್ಸವಕ್ಕಾಗಿ ಸುಮಾರು ಹದಿನೈದರಿಂದ ಹದಿನೇಳು ಲಕ್ಷ ರೂಪಾಯಿಗಳ ಖರ್ಚು ವೆಚ್ಚ ನಡೆಯುತ್ತದೆ. ಈ ಧನರಾಶಿಯು ಬೇರೆಬೇರೆ ಮೂಲಗಳಿಂದ ಪ್ರಾಯೋಜಕತ್ವದ ರೂಪದಲ್ಲಿ ಬರುತ್ತದೆ. ಆದರೆ ಹೆರಿಟೇಜ್ ಟ್ರಸ್ಟ್ ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುವ ನಿಯಮವೇನೆಂದರೆ ಯಾವುದೇ ರೀತಿಯ ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಕತ್ವವನ್ನು ಪಡೆಯುವುದಿಲ್ಲ. ಏಕೆಂದರೆ ಕಾರ್ಪೊರೇಟ್ ಗಳು ತಮ್ಮ ಉತ್ಪನ್ನಗಳ ಪ್ರದರ್ಶನವನ್ನು ಉತ್ಸವದಲ್ಲಿ ಮಾಡುವಂತೆ ಒತ್ತಡ ಹೇರುತ್ತಾರೆ. ಉತ್ಸವದ ಉದ್ದೇಶದ ಪಾವಿತ್ರ್ಯತೆಯ ರಕ್ಷಣೆಯ ಉದ್ದೇಶದಿಂದ ಅವುಗಳನ್ನು ಪಡೆಯುವುದಿಲ್ಲ.

ಈ ಬಾರಿ ಭಾಗವತ ಸಪ್ತಾಹ ಇತ್ಯಾದಿ ಅನೇಕ ಹೆಚ್ಚುವರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಪ್ರತೀ ವರ್ಷಕ್ಕಿಂತಲೂ ಈ ಬಾರಿ ಖರ್ಚು ಹೆಚ್ಚು ಅಂದರೆ ಸುಮಾರು 27.8 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ಹಾಗಾಗಿ ಇಂಡಿಕ್ ಅಕ್ಯಾಡೆಮಿ ಹಾಗೂ ಸಂಬಂಧಿಸಿದ ಎಲ್ಲ ಚಿಂತಕರು ತಮ್ಮಲ್ಲಿ ಈ ಉತ್ಸವಕ್ಕೆ ಧನಸಹಾಯ ಮಾಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಬ್ಯಾಂಕ್ ಖಾತೆಯ ವಿವರಗಳು ಈ ಕೆಳಕಂಡಂತಿವೆ.

NAME OF ACCOUNT: HERITAGE PARAMPARA

NAME OF BANK: STATE BANK OF INDIA

TYPE OF A/C: CURRENT ACCOUNT

ACCOUNT NO: 37475950196

IFSC CODE: SBIN0003357

IndiaFacts Staff

IndiaFacts Staff articles, reports and guest pieces